ಯಾದಗಿರಿ, ಮಾಚ್ 19: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಸರ್ವಪ್ರಯತ್ನ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು ಅವರು ಇಂದು ಸುರಪುರ ತಾಲ್ಲೂಕಿನ ದೇವತ್ಕಲ್ ಹೆಲಿಪ್ಯಾಡ್ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 3000 ಕೋಟಿ ರೂ. ಅನುದಾನ ನೀಡಿದ್ದು, ವಲಯವಾರು ಶಿಕ್ಷಣ, ಆರೋಗ್ಯ, ಅಪೌಷ್ಠಿಕತೆಗೆ ಪ್ರತ್ಯೇಕವಾಗಿ ಅನುದಾನ ನೀಡಿದೆ. ಅದರ ಜೊತೆಗೆ ಎಸ್.ಡಿ.ಪಿ ಅಡಿ ನಂಜುಂಡಪ್ಪ ವರದಿ ಪ್ರಕಾರ ನೀಡಬೇಕಾಗುತ್ತದೆ. ಸಂಪುಟ ಉಪಸಮಿತಿ ರಚಿಸಿದ್ದು,ಅದರ ಶಿಫಾರಸ್ಸಿನಂತೆ ಅನುದಾನ ನೀಡಲಾಗುವುದು ಎಂದರು.
ಯಾದಗಿರಿ ಜಿಲ್ಲೆಯಲ್ಲಿ 1000 ಕೋಟಿ ರೂ.ಗಳಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ಹಾಗೂ ಸಿಲಿಂಡರ್ ಸ್ಪೋಟದಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಲಾಗುವುದು. ಅಭಿವೃದ್ಧಿ ಪ್ರಾರಂಭಿಸುವ ದೃಷ್ಟಿಯಿಂದ ಇಂದು ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು. ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ತಿಳಿಸುವ ಸಲುವಾಗಿ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರ್ಪಡೆ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ. ಇದರ ರೂಪುರೇಷೆಗಳನ್ನು ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.