ದೇವನಹಳ್ಳಿಯ 50 ನೇ ನೂತನ ಬಸ್ ಘಟಕ ಉದ್ಘಾಟಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು

ದೇವನಹಳ್ಳಿ,ಮಾ,19 : ಬೆಂಗಳೂರಿನಂತೆಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೂತನ ಬಸ್ ಘಟಕವು ಹೆಚ್ಚು ಸಹಕಾರಿಯಾಗಲಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ತಿಳಿಸಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಿರ್ಮಿಸಿರುವ ನೂತನ ಬಸ್ ಘಟಕವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು. ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ವಿಜಯಪುರ, ಕೋಲಾರ ಸೇರಿದಂತೆ ಇತರೆ ತಾಲ್ಲೂಕುಗಳು, ಹೋಬಳಿಗಳು, ಹಳ್ಳಿಗಳಿಗೆ ಸಾರಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರೂ. 5 ಕೋಟಿ 75 ಲಕ್ಷಗಳ ಅನುದಾನದಲ್ಲಿ ದೇವನಹಳ್ಳಿಯಲ್ಲಿ ನೂತನವಾಗಿ ಬಿಎಂಟಿಸಿಯ ಐವತ್ತನೇ ಘಟಕವನ್ನು ಸ್ಥಾಪಿಸಲಾಗಿದೆ ಎಂದರು.


ಸಾರಿಗೆ ನೌಕರರ ವೇತನಕ್ಕಾಗಿ ರೂ.3000 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಸಿಬ್ಬಂದಿಗಳ ವೇತನ ವಿಳಂಬವಾಗದಂತೆ ತಡೆಯಲು ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರಿಗೆ ನೌಕರರು ಬೇಡಿಕೆಗಳಿದ್ದಲ್ಲಿ, ಮುಷ್ಕರ ಮಾಡದೇ ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದರಲ್ಲದೆ, ಎಷ್ಟೇ ಸಮಸ್ಯೆಗಳಿದ್ದರೂ, ಒತ್ತಡವಿದ್ದರೂ ನಿಗಮಗಳ ಬಸ್ ಚಾಲಕರು ಯಾವುದೇ ಅಪಘಾತ ಮಾಡದೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹಲವು ಬಸ್‌ಗಳು ನಿಂತ ಕಾರಣ ಮುಖ್ಯಮಂತ್ರಿಗಳು 1000 ಬಸ್‌ಗಳ ಖರೀದಿಗೆ ಘೋಷಿಸಿದ್ದು, ಈಗಾಗಲೇ ಮೊದಲ ಹಂತದಲ್ಲಿ 643, ನಂತರ 170 ಹೊಸ ಡಿಸೇಲ್ ಬಸ್‌ಗಳನ್ನು ಖರೀದಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ರೂ. 50 ಕೋಟಿ ಅನುದಾನದಲ್ಲಿ, ರೂ.45 ಕೋಟಿಯ 90 ಬಸ್ ಎಲೆಕ್ಟ್ರಿಕ್ ಬಸ್ ಖರೀದಿಸಲಾಗಿದೆ ಹಾಗೂ ಉಳಿದ ರೂ.5 ಕೋಟಿ ಅನುದಾನದಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಪರಿಸರ ಉಳಿಸಲು ಎಲೆಕ್ಟ್ರಿಕ್ ಬಸ್‌ಗಳು ಸಹಕಾರಿಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು.


ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವಂತೆ ಉಚಿತ ಪ್ರಯಾಣದ ಬಸ್ ಪಾಸ್ ನೀಡಲಾಗಿದೆ. ಸಾರಿಗೆ ಇಲಾಖೆಯಲ್ಲಿ ಹಲವು ಉತ್ತಮ ಬದಲಾವಣೆಗಳನ್ನು ತರಲು, ನಿಗಮಗಳನ್ನು ಲಾಭದಾಯಕವನ್ನಾಗಿಸಲು ಹಾಗೂ ಸಾರಿಗೆ ಸಿಬ್ಬಂದಿಗಳ ವೇತನ ಪರಿಷ್ಕರಣೆಗಾಗಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ನೇಮಿಸಲಾಗುವುದು ಎಂದು ಹೇಳಿದರಲ್ಲದೆ ಸಾರಿಗೆ ಇಲಾಖೆಯು ಸಾರ್ವಜನಿಕರ ಸೇವೆಗೆ ಸದಾ ಸಿದ್ಧವಾಗಿರುತ್ತದೆ ಎಂದರು.
ಪೌರಾಡಳಿತ, ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ಉದ್ಯಮಗಳ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ನಾಗರಾಜು(ಎಂ.ಟಿ.ಬಿ) ಅವರು ಮಾತನಾಡಿ ಪ್ರಸ್ತುತ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದೆ. ಸವಾಲಾಗಿ ಪರಿಣಮಿಸಿದ್ದ, ದೇಶದ ಜನರಿಗೆ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಯಶಸ್ವಿಯಾಗಿ ನಿರ್ವಹಿಸಿದೆ.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಿಂದಾಗಿ ಜನರಿಗೆ ಅವರಿದ್ದಲ್ಲಿಯೇ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ನೂತನ ಬಸ್ ಘಟಕದಿಂದಾಗಿ ಈ ಭಾಗದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ದೇವನಹಳ್ಳಿ ಶಾಸಕರಾದ ಎಲ್.ಎನ್.ನಿಸರ್ಗ ನಾರಾಯಣಸ್ವಾಮಿ ಅವರು ಮಾತನಾಡಿ ಸಾರಿಗೆ ನಿಗಮಗಳ ನೌಕರರ ವೇತನಕ್ಕಾಗಿ 3000 ಕೋಟಿ ರೂ. ಬಿಡುಗಡೆ ಮಾಡಿರುವುದು ಹಾಗೂ ಹಲವಾರು ನೂತನ ಬಸ್‌ಗಳನ್ನು ಖರೀದಿಸಿರುವುದು ಉತ್ತಮ ವಿಷಯವಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಹಾಗೂ ಬೃಹತ್ ಕೈಗಾರಿಕೆಗಳು ತಲೆ ಎತ್ತುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಬಸ್ ಘಟಕ ನಿರ್ಮಾಣ ಮಾಡಿರುವುದಕ್ಕೆ ದೇವನಹಳ್ಳಿ ತಾಲ್ಲೂಕಿನ ಎರಡೂವರೆ ಲಕ್ಷ ಜನರ ಪರವಾಗಿ ಶಾಸಕರು ಸಾರಿಗೆ ಸಚಿವರಿಗೆ ಧನ್ಯವಾದಗಳನ್ನು ತಿಳಿಸಿದರು.
ಬಿಎಂಟಿಸಿ ಅಧ್ಯಕ್ಷರಾದ ಎನ್.ಎಸ್.ನಂದೀಶ್‌ರೆಡ್ಡಿ, ಉಪಾಧ್ಯಕ್ಷರಾದ ಎಂ.ಆರ್.ವೆಂಕಟೇಶ್, ದೇವನಹಳ್ಳಿ ಪುರಸಭೆ ಅಧ್ಯಕ್ಷರಾದ ಗೋಪಮ್ಮ, ಮಾಜಿ ಶಾಸಕರಾದ ಚಂದ್ರಣ್ಣ, ಸಾರಿಗೆ ಇಲಾಖೆ ಅಧಿಕಾರಿಗಳು, ಬಿಎಂಟಿಸಿಯ ಸಿಬ್ಬಂದಿಗಳು, ಮತ್ತಿತ್ತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top