ಮಹಿಳಾ ಹಕ್ಕುಗಳ ಹೋರಾಟದ ಪ್ರತಿಫಲವೇ ವಿಶ್ವ ಮಹಿಳಾ ದಿನಾಚರಣೆ

ದೇವನಹಳ್ಳಿ,ಮಾ,10 : ಅಸಮಾನತೆಯ ಸಂಕೇತದ ಹೋರಾಟದ ಕುರುಹಾಗಿ ಅಮೆರಿಕದ ನಗರದಲ್ಲಿ ಸುಮಾರು ಹದಿನೈದು ಸಾವಿರ ಮಹಿಳೆಯರಿಂದ ಶುರುವಾದ ಹೋರಾಟದ ಪ್ರತಿಫಲದಿಂದಾಗಿ ಇಂದು ಮಹಿಳಾ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಮಹಿಳೆಗೆ ಮತದಾನ ಸೇರಿದಂತೆ ಯಾವುದೇ ರೀತಿಯ ಹಕ್ಕು ಗಳು ಇಲ್ಲದೆ ಇರುವ ಸಂದರ್ಭದಲ್ಲಿ ಬೀದಿಗಿಳಿದು ಸರ್ಕಾರಕ್ಕೆ ಒತ್ತಾಯ ಮಾಡಿದ ಪ್ರತಿಫಲವಾಗಿ ಇಂದು ಜಗತ್ತಿನ ಎಲ್ಲ ಮಹಿಳೆಯರಿಗೆ ಮತದಾನ ಗಂಡಿನಷ್ಟೇ ವೇತನ ಈ ರೀತಿಯ ಸವಲತ್ತುಗಳು ದೊರೆಯುವಂತಾಗಿದೆ ಎಂದು ಯಲಿಯೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪವಿತ್ರ ಸೋಮಶೇಖರ್ ಹೇಳಿದರು. ದೇವನಹಳ್ಳಿ ತಾಲೂಕು ಯಲಿಯೂರು ಗ್ರಾಮದ ವರ್ಣ ವಿದ್ಯಾಶ್ರಯ ಅನಾಥಾಶ್ರಮದಲ್ಲಿ ಟಿ.ಅಗ್ರಹಾರದ ಪರಿವರ್ತನಾ ಕಲಾ ಸಂಸ್ಥೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆ ಸಾಕ್ಷರತೆ ಇಲ್ಲದಿದ್ದರೂ ಮನಸ್ಸು ಮಾಡಿದರೆ ಆಕೆ ಆಡಳಿತ ನಡೆಸಬಲ್ಲರು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ ಎಂದು ತಿಳಿಸಿದರು.

ವಿಶ್ವೇಶ್ವರಯ್ಯ ಶಾಲೆಯ ಮುಖ್ಯಸ್ಥೆ ಆಶಾ ತ್ಯಾಗರಾಜ ರವರು ಮಾತನಾಡುತ್ತಾ ಎಲ್ಲಿ ಹೆಣ್ಣನ್ನು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಹೆಣ್ಣಿಗೆ ಗೌರವ ನೀಡದಿದ್ದರೆ ಸಮಾಜ ಪರಿಪೂರ್ಣವಾಗಲು ಸಾಧ್ಯವಿಲ್ಲ ಹಾಗಾಗಿ ಹೆಣ್ಣನ್ನು ಗೌರವಿಸಿ ಬೆಂಬಲಿಸಿ ಅವರು ಬೆಳೆಯಲು ಅನುವಾಗಿ ಎಂದು ಕರೆ ನೀಡಿದರು. ಪರಿವರ್ತನಾ ಕಲಾ ಸಂಸ್ಥೆಯ ಕಾರ್ಯದರ್ಶಿ ಹಾಗೂ ನೃತ್ಯ ಸಂಯೋಜಕಿಯಾದ ದೀಪಿಕಾ ದೇವರಾಜ್ ರವರು ಮಾತನಾಡುತ್ತಾ ಮಾರ್ಚ್ 8 1908 ರಂದು ಮೊದಲು ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ನ್ಯೂಯಾರ್ಕ್ ನಗರದಲ್ಲಿ ಹೋರಾಟ ಮಾಡಿದ್ದರ ಪ್ರತಿಫಲವೇ 1975ರಲ್ಲಿ ವಿಶ್ವಸಂಸ್ಥೆಯು ಮೊದಲಬಾರಿಗೆ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲು ಅನುವುಮಾಡಿಕೊಟ್ಟಿತು ಈಗ 48 ನೇ ವರ್ಷದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದರೂ ಹೆಣ್ಣಿಗೆ ಸಂಪೂರ್ಣ ಸ್ವಾತಂತ್ರ್ಯವಿಲ್ಲ ಇನ್ನೂ ಪುರುಷ ಸಮಾಜದ ಸಂಕೋಲೆಯಲ್ಲಿಯೇ ಬದುಕುತ್ತಿದ್ದಾಳೆ. ಸ್ತ್ರೀ ಸ್ವಾತಂತ್ರ್ಯ ಎನ್ನುವುದು ಎಲ್ಲ ಕ್ಷೇತ್ರಗಳಲ್ಲೂ ಭಾಷಣದ ವೇದಿಕೆಯ ಮಾತುಗಳು ಆಗಬಾರದು ಆಗಮಾತ್ರ ಸ್ವಾತಂತ್ರ್ಯದ ಕಹಳೆ ಸರಿಸಮಾನವಾಗಿ ಊದಿ ದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಹಿಳೆ ಮತ್ತು ಸಬಲೀಕರಣದ ಬಗ್ಗೆ ಉಪನ್ಯಾಸವನ್ನು ನಿವೃತ್ತ ಮುಖ್ಯ ಶಿಕ್ಷಕರಾದ ದೇವನಹಳ್ಳಿಯ ಸರಸ್ವತಮ್ಮ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವರ್ಣ ವಿದ್ಯಾಶ್ರಯದ ಮಂಜುಳಾ ದೇವರಾಜ್ , ಯಲಿಯೂರು ಗ್ರಾಮ ಪಂಚಾಯತಿಯ ಉಪಾಧ್ಯಕ್ಷೆ ಪವಿತ್ರ ಸೋಮಶೇಖರ್, ಸದಸ್ಯರಾದ ಲಕ್ಷ್ಮಮ್ಮ, ತಮ್ಮೇ ನಹಳ್ಳಿಯ ಸದಸ್ಯರಾದ ಆಂಜಿನಮ್ಮ ನಾರಾಯಣಸ್ವಾಮಿ, ಆಶಾ ತ್ಯಾಗರಾಜ್, ಮಂಜುಳಾ ದೇವರಾಜ್, ಮಿತ್ತನಹಳ್ಳಿಯ ಸುಮಾ, ಟಿ. ಅಗ್ರಹಾರದ ಅಂಗನವಾಡಿ ಶಿಕ್ಷಕಿ ಲಕ್ಷ್ಮಿ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು 12 ಹೆಚ್ಚು ಮಹಿಳೆಯರನ್ನು ಪರಿವರ್ತನಾ ಕಲಾ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಹಾಗೂ ಇದೇ ಸಂದರ್ಭದಲ್ಲಿ ವರ್ಣ ವಿದ್ಯಾಶ್ರಯ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ,ಕ್ರೀಡೆ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು ಮತ್ತು ಗೆದ್ದಂತವರಿಗೆ ಪೆನ್ನು ಪುಸ್ತಕಗಳ ಬಹುಮಾನವನ್ನು ವಿತರಿಸಲಾಯಿತು.

Leave a Comment

Your email address will not be published. Required fields are marked *

Translate »
Scroll to Top