ಕೊರೊನಾ ಲಾಕ್ಡೌನ್ ವೇಳೆ ಬೆಂಗಳೂರಿನಲ್ಲಿದ್ದ ಕೆಲಸ ಕಳೆದುಕೊಂಡು ಊರಿಗೆ ವಾಪಸ್ಸಾದ ಪ್ರದೀಪ್ ಕುರಿಗಳನ್ನು ಕೊಂಡು ಕುರಿ ಸಾಕಾಣಿಕೆಯನ್ನೇ ತಮ್ಮ ಉದ್ಯೋಗವಾಗಿಸಿಕೊಂಡರು. ನಂತರ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಿಸಿಕೊಂಡು ಉತ್ತಮ ಆದಾಯ ಗಳಿಸುತ್ತಾ ಸ್ವಗ್ರಾಮದಲ್ಲೇ ನೆಲೆ ಕಂಡುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಭಾರಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಣ್ಣಿಗೆರೆಯ ಪ್ರದೀಪ್ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೋವಿಡ್ ವೇಳೆ ಕೆಲಸವಿಲ್ಲದೇ ಊರಿಗೆ ಬಂದಾಗ ಅವರು ಆರಂಭಿಸಿದ ಉದ್ಯೋಗ ಕುರಿ ಸಾಕಾಣಿಕೆ. ತಮ್ಮ ಉಳಿತಾಯದ ಹಣದಲ್ಲಿ ಮೊದಲಿಗೆ ೧೦ ಕುರಿಗಳನ್ನು ಸಾಕಿದ ಅವರು ಏಳರಿಂದ ಎಂಟು ತಿಂಗಳಲ್ಲಿ ಈ ಕುರಿಗಳನ್ನು ಮಾರಿ ಉತ್ತಮ ಆದಾಯ ಗಳಿಸಿ, ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳನ್ನು ಖರೀದಿಸಿದ್ದಾರೆ.
ಪ್ರಸ್ತುತ ೪೦ ಕುರಿಗಳನ್ನು ಹೊಂದಿದ್ದು, ಕುರಿ ಗೊಬ್ಬರದಿಂದ ಸಹ ಉತ್ತಮ ಆದಾಯ ಬರುತ್ತಿದೆ. ಇದಕ್ಕೆಲ್ಲಾ ಸಹಕಾರಿಯಾಗಿದ್ದು ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿಕೊಂಡ ಕುರಿ ಶೆಡ್. ಸುಸಜ್ಜಿತ ಕುರಿ ಶೆಡ್ನಿಂದಾಗಿ ಕುರಿ ಸಾಕಾಣಿಕೆ ಉದ್ಯೋಗ ವ್ಯವಸ್ಥಿತವಾಗಿದ್ದು, ಸಾಕಾಣಿಕೆ ಕೂಡ ಸುಲಭವಾಗಿದೆ. ಇವರ ಕುರಿ ಶೆಡ್ ಇತರರಿಗೆ ಮಾದರಿಯಾಗಿದ್ದು ಸುತ್ತಮುತ್ತಲಿನ ರೈತರು ಕುರಿ ಶೆಡ್ಗೆ ಭೇಟಿ ನೀಡಿ ಕುರಿ ಸಾಕಾಣಿಕೆ ಬಗ್ಗೆ ಪ್ರದೀಪ್ರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಬೆಂಗಳೂರಿನಿಂದ ವಾಪಸ್ಸಾದ ಪ್ರದೀಪ್, ನರೇಗಾ ಯೋಜನೆಯ ಸೌಲಭ್ಯಗಳ ಕುರಿತು ಗ್ರಾಮದಲ್ಲಿ ಅಂಟಿಸಲಾದ ಪ್ರಚಾರದ ಪೊಸ್ಟರ್ಗಳನ್ನು ಓದಿಕೊಂಡು, ಗ್ರಾ.ಪಂ ಗೆ ಭೇಟಿ ನೀಡಿ, ಪಿಡಿಓ ಅವರಿಂದ ಕುರಿ ಶೆಡ್ ಕುರಿತು ಹೆಚ್ಚಿನ ಮಾಹಿತಿ ಪಡೆದು ಯೋಜನೆಯ ಸದುಪಯೋಪ ಪಡೆದಿದ್ದಾರೆ.
ಮಹಾತ್ಮಾಗಾಂಧಿ ನರೇಗಾ ಯೋಜನೆಯ ಮಾರ್ಗಸೂಚಿಗಳನ್ವಯ ಕಾಮಗಾರಿಯನ್ನು ಗ್ರಾಮಸಭೆಯಲ್ಲಿ ಅನುಮೋದನೆ ಪಡೆದು ಕ್ರಿಯಾ ಯೋಜನೆ ಸಿದ್ದಪಡಿಸಿ, ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳಿಂದ ಅನುಮೋದನೆ ಪಡೆದು ಯೋಜನೆ ಅನುಷ್ಟಾನ ಮಾಡಲಾಗಿದೆ.
೧೦ ಮಾನವ ದಿನಗಳಲ್ಲಿ ಅಂದಾಜು ವೆಚ್ಚ ರೂ. ೬೮ ಸಾವಿರದಲ್ಲಿ ಈ ಶೆಡ್ನ್ನು ನಿರ್ಮಿಸಲಾಗಿದ್ದು, ಈ ಸೌಲಭ್ಯದಿಂದಾಗಿ ಸುಸಜ್ಜಿತ ಕುರಿ ಶೆಡ್ ನಿರ್ಮಾಣದೊಂದಿಗೆ ಕುರಿ ಸಾಕಾಣಿಕೆಯಲ್ಲಿ ಹೆಚ್ಚಳ ಮತ್ತು ಆದಾಯದಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.
-ಎಂ.ಎಲ್.ವೈಶಾಲಿ, ಜಿ.ಪಂ, ಸಿಇಓ
ಪ್ರದೀಪ್ರ ನುಡಿ…
ತಾನು ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡ ನಂತರ ಉಳಿತಾಯದ ಅಲ್ಪಸ್ವಲ್ಪ ಹಣದಲ್ಲಿ ಮೊದಲಿಗೆ ೧೦ ಕುರಿಗಳನ್ನು ಖರೀದಿಸಿ, ಸಾಕಾಣಿಕೆ ಆರಂಭಿಸಿದೆ. ನಂತರ ನರೇಗಾ ಯೋಜನೆ ನೆರವಿನೊಂದಿಗೆ ಒಂದು ಸುಸಜ್ಜಿತ ಕುರಿ ಶೆಡ್ ನಿರ್ಮಿಸಿಕೊಂಡು, ನಂತರ ಆ ೧೦ ಕುರಿಗಳನ್ನು ಏಳರಿಂದ ಎಂಟು ತಿಂಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣಕ್ಕೆ ಮಾರಾಟ ಮಾಡಿ, ಮತ್ತೆ ೪೦ ಕುರಿಗಳನ್ನು ಖರೀದಿಸಿ ಸಾಕಾಣಿಕೆ ಮಾಡುತ್ತಿದ್ದೇನೆ. ಗೊಬ್ಬರದಿಂದಲೂ ಉತ್ತಮ ಆದಾಯ ಇದ್ದು, ಈ ಉದ್ಯೋಗ ನನಗೆ ನೆಮ್ಮದಿ ನೀಡಿದೆ.
- ಪ್ರದೀಪ್, ರೈತ, ಬೆಣ್ಣಿಗೆರೆ