ಕೆಳದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ತೀರ್ಮಾನ

ಬೆಂಗಳೂರು, ಫೆಬ್ರವರಿ 27: ಕೆಳದಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಪಡಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕೆಳದಿ ರಾಣಿ ಚೆನ್ನಮ್ಮನ ಪಟ್ಟಾಭಿಷೇಕದ 350 ನೇ ವರ್ಷಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಿದ್ದರು. ಕೆಳದಿ ಚನ್ನಮ್ಮನ ಪಟ್ಟಾಭಿಷೇಕದ ದಿನದಂದು ಆಚರಣೆ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಮುಂದಿನ ವರ್ಷ ಕೆಳದಿ ಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದರು. ಕೆಳದಿ ಚನ್ನಮ್ಮ ಒಬ್ಬ ಧೀರ ಮಹಿಳೆ. ಇಂತಹ ವೀರ ಮಹಿಳೆಯರನ್ನು ಗುರುತಿಸುವ ಮೂಲಕ ಕರ್ನಾಟಕದ ಭವ್ಯ ಪರಂಪರೆಯ ಜೊತೆಗೆ ಭವಿಷ್ಯ ವನ್ನು ನಿರ್ಮಾಣ ಮಾಡಬಹುದು ಎಂದರು.

ಪ್ರಗತಿಪರ ನಿಲುವಿನ ಚನ್ನಮ್ಮ ಕರ್ನಾಟಕ ರಾಜ್ಯಕ್ಕೆ ತನ್ನದೇ ಸಂಸ್ಕೃತಿ, ಹೋರಾಟ , ಭಾಷೆ, ಜೀವನಶೈಲಿ, ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಹೊಂದಿದೆ. ಇವೆಲ್ಲವೂ ಸಮಗ್ರವಾಗಿ ಸೇರಿದಾಗ ಮಾತ್ರ ಅದು ಕರ್ನಾಟಕವಾಗುತ್ತದೆ. ಇದರಲ್ಲಿ ಕೆಳದಿ ಚನ್ನಮ್ಮನ ಪಾತ್ರ ದೊಡ್ಡದಿದೆ. ಮಹಿಳೆಯೊಬ್ಬಳು ಕಂದಾಚಾರವನ್ನು ಬಿಟ್ಟು ಪ್ರಗತಿಪರ ಚಿಂತನೆಯಿಂದ ಆ ಕಾಲದಲ್ಲಿ ತನ್ನ ನಿಲುವು ಹಾಗೂ ಗಟ್ಟಿತನಗಳನ್ನು ತೋರಿದಳು. ದೂರದೃಷ್ಟಿ ,ಕ್ಷಮಿಸುವ ದೊಡ್ಡ ಗುಣ, ಆಕೆಯಲ್ಲಿತ್ತು. ಚನ್ನಮ್ಮನ ಅಸ್ತಿತ್ವಕ್ಕೆ ಧಕ್ಕೆ ತಂದು ಮೂರು ಬಾರಿ ಆಕ್ರಮಿಸಿದವರನ್ನು ಕ್ಷಮಿಸಿ ಆಶ್ರಯ ನೀಡುವುದು ಅಪರೂಪ. ಕಿತ್ತೂರು ಚೆನ್ನಮ್ಮ ಆ ಭಾಗದಲ್ಲಿ ಹೋರಾಡಿದಂತೆಯೇ ಕೆಳದಿ ಚನ್ನಮ್ಮನ ಹೋರಾಟವೂ ರೋಮಾಂಚಕವಾಗಿದೆ. ನಮ್ಮ ಮಕ್ಕಳಿಗೆ ಇವರ ಬಗ್ಗೆ ಪಠ್ಯ ಮುಖೇನ ತಿಳಿಸುವ ಅವಶ್ಯಕತೆ ಇದೆ.

ಪೋಲಿಯೋ ಹಾಗೂ ಕೆಳದಿ ಚನ್ನಮ್ಮನ ಕಾರ್ಯಕ್ರಮ ಒಟ್ಟಿಗೆ ನಡೆದಿರುವುದು ಆರೋಗ್ಯ ಹಾಗೂ ಐತಿಹಾಸಿಕ ಕರ್ನಾಟಕದ ಸಂಗಮವಾಗಿದೆ ಎಂದು ಅಭಿಪ್ರಾಯ ಪಟ್ಟರು. ದೂರದೃಷ್ಟಿ ಇರುವ ಪಂಚಮಸಾಲಿ ಶ್ರೀ ವಚನಾನಂದ ಜಗದ್ಗುರುಗಳು ತುಂಗಾ ತಟದಲ್ಲಿ ತುಂಗಾಭದ್ರಾರತಿ ಕಾರ್ಯಕ್ರಮ ರೂಪಿಸಿ, ಸೃಷ್ಟಿಕರ್ತ ನಿಗೆ ನಮ್ಮ ನಮನಗಳನ್ನು ಸಲ್ಲಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅದು ನಮ್ಮ ಸಂಸ್ಕೃತಿ. ಎಲ್ಲಾ ನದಿ ತಟಗಳಲಿ ಆರತಿ ಕಾರ್ಯಕ್ರಮ ರೂಪಿಸಲು ಬೇಡಿಕೆ ಬರುತ್ತಿದ್ದು. ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top