ದೇವನಹಳ್ಳಿ: ವಿಧಾನ ಸಭಾ ಕ್ಷೇತ್ರದ ಜಿಪಂ ಕ್ಷೇತ್ರಗಳಲ್ಲಿ ಕಾರಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಈ ಹಿಂದೆ ಪ.ಜಾತಿಯಾದ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿಯ ರಾಜ್ಯಾಧ್ಯಕ್ಷ ಬಿಜ್ಜವಾರ ನಾಗರಾಜ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲವಾರು ಸಂಘಟನೆಗಳ ಮೂಲಕ ಜನಪರ ಸೇವೆಯನ್ನು ಸಲ್ಲಿಸಲಾಗಿದೆ. ಒಂದೂವರೆ ವರ್ಷದಿಂದ ಬಿಜ್ಜವಾರ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದೇನೆ. ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ಒಳ್ಳೆಯ ರೀತಿಯಲ್ಲಿ ಸ್ಪಂಧಿಸಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದು, ರೈತರ, ಮಹಿಳೆಯರ ಮತ್ತು ದೀನದಲಿತರ ಪರವಾಗಿ ಸಮಾಜ ಸೇವೆಯ ಜೊತೆಯಲ್ಲಿ ರಾಜಕೀಯದಲ್ಲಿ ಅಧಿಕಾರವನ್ನು ಹೊಂದಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಈ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಬಹಳಷ್ಟು ಸರಕಾರಿ ಜಾಗಗಳಲ್ಲಿ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಮತ್ತೇ ಸರಕಾರಕ್ಕೆ ನೀಡಿ, ಆ ಜಾಗಗಳಲ್ಲಿ ಸಮುದಾಯ ಭವನ, ಅಂಬೇಡ್ಕರ್ ಭವನ, ಇತರೆ ಭವನಗಳನ್ನು ನಿರ್ಮಿಸಲು ಶ್ರಮವಹಿಸಲಾಗುವುದು. ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಯೋಜನೆ ರೂಪಿಸಲಾಗುತ್ತದೆ. ಕಾರಹಳ್ಳಿ ಜಿಪಂ (ಬಿಜ್ಜವಾರ) ಕ್ಷೇತ್ರಕ್ಕೆ ಸಾಮಾನ್ಯ ಕ್ಷೇತ್ರವಾಗಿದ್ದರೂ ಸಹ ಕ್ಷೇತ್ರ ಅಭಿವೃದ್ಧಿಗಾಗಿ ಎಲ್ಲರ ಸಹಕಾರದೊಂದಿಗೆ ಈ ಬಾರಿ ಅಂಬೇಡ್ಕರ್ ಪಾರ್ಟಿ ಆಪ್ ಇಂಡಿಯದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದರು