ಬಳ್ಳಾರಿ,ಫೆ.10: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂತ್ರಾಲಯ, ಕರ್ನಾಟಕ ಸರಕಾರ ಮತ್ತು ವಿಮ್ಸ್ ಸಂಯುಕ್ತ ಆಶ್ರಯದಲ್ಲಿ ಪ್ರಧಾನಮಂತ್ರಿ ಸ್ವಸ್ಥ್ಯ ಸುರಕ್ಷಾ ಯೋಜನೆ ಅಡಿ ನಿರ್ಮಿಸಲಾಗಿರುವ ಟ್ರಾಮಾ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಟ್ರಾಮಾಕೇರ್ ಸೇವೆಗಳಿಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಶನಿವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು ಅವರು ಈ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಟ್ರಾಮಾಕೇರ್ ಸೇವೆಗಳು ಆರಂಭವಾಗುತ್ತಿರುವುದು ಸಂತಸದ ವಿಷಯ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆಗೆ ಆಗಮಿಸುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಮತ್ತು ಸಮರ್ಪಕವಾದ ಚಿಕಿತ್ಸೆ ನೀಡುವುದರ ಮೂಲಕ ಅವರನ್ನು ಗುಣಮುಖರನ್ನಾಗಿ ಮಾಡಿ ಎಂದರು.
ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸರಕಾರ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಹೇಳಿದ ಅವರು ಇಂದು ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರ(ಎಚ್ಒಡಿಗಳ) ಸಭೆಯಲ್ಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿದ್ದುಕೊಂಡು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ. ಹಾಜರಿ ಹಾಕಿ ಖಾಸಗಿ ಕ್ಲಿನಿಕ್ ಗಳಿಗೆ ತೆರಳಿದರೇ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸೂಚನೆ ನೀಡಲಾಗಿದೆ. ರೋಗಿಗಳಿಗೆ ಔಷಧಿಗಳನ್ನು ಹೊರಗಡೆ ತರುವಂತೆ ಖಾಸಗಿ ಚೀಟಿ ನೀಡಿದರೇ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ ಎಂದರು. ನಾನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವನಾಗಿದ್ದ ಎರಡೂ ಸಂದರ್ಭದಲ್ಲಿಯೂ ಇಲಾಖೆಯಲ್ಲಿ ತಂದ ಸುಧಾರಣೆಗಳನ್ನು ಈ ಸಂದರ್ಭದಲ್ಲಿ ತಿಳಿಸಿದ ಸಚಿವ ಶ್ರೀರಾಮುಲು ಅವರು ವೈದ್ಯರು ಮತ್ತು ನರ್ಸ್ ಕೊರತೆ ಇದ್ದು,ಮುಂದಿನ ದಿನಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು ಎಂದರು.
ಆಯುಷ್ಮಾನ್ ಕಾರ್ಡ್‌ಗಳನ್ನು ಬಡವರಿಗೆ ಒದಗಿಸುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. 2008-09ರ ಸಂದರ್ಭದಲ್ಲಿ ಈ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಿದ್ದೆವು;ಈಗ ನನ್ನಕೈಯಲ್ಲಿಯೇ ಸೇವೆಗಳಿಗೆ ಉದ್ಘಾಟನೆಯಾಗುತ್ತಿರುವುದು ಖುಷಿ ತಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ ಅವರು ಮಾತನಾಡಿ, ಈ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬರಲು ಮುಖ್ಯ ಕಾರಣಿಕರ್ತರು ಮಾಜಿ ಸಚಿವರಾದ ಜಿ.ಜನಾರ್ಧನರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು;ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಮಾತ್ರ ಇಂತಹ ಕಟ್ಟಡಗಳು ತಲೆಎತ್ತಲು ಸಾಧ್ಯ ಎಂದರು. ಉತ್ತಮ ಕಾರ್ಯಕ್ಕೆ ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸುವುದರ ಮೂಲಕ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಮಾಡೋಣ ಎಂದು ಹೇಳಿದ ಶಾಸಕ ನಾಗೇಂದ್ರ ಅವರು ಬಳ್ಳಾರಿ ಜಿಲ್ಲೆಯಲ್ಲಿರುವ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಮುತುವರ್ಜಿ ವಹಿಸಬೇಕು ಎಂದರು. ಈ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯು ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಉಪಯೋಗಕ್ಕೆ ಬಂತು;ಈಗ ಇಲ್ಲಿ ಟ್ರಾಮಾಸೇವೆಗಳು ಆರಂಭವಾಗುತ್ತಿರುವುದು ಸಂತಸದ ವಿಷಯ ಎಂದರು.
ಏಮ್ಸ್ ಮಾದರಿಯಲ್ಲಿ ಬಳ್ಳಾರಿಯಲ್ಲಿ ಸುಸಜ್ಜಿತ ಆಸ್ಪತ್ರೆ,ಇಎಸ್ಐ ಆಸ್ಪತ್ರೆಗಳನ್ನು ನಿರ್ಮಿಸಲು ಕ್ರಮವಹಿಸಬೇಕು ಎಂದು ಅವರು ಸಚಿವರಿಗೆ ಕೋರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು,ಪ್ರಧಾನಮಂತ್ರಿ ಸ್ವಸ್ಥ್ಯ ಸುರಕ್ಷಾ ಯೋಜನೆ ಅಡಿ ಭಾರತ ಸರಕಾರ ಹಾಗೂ ರಾಜ್ಯ ಸರಕಾರದ 60:40ಅನುಪಾತದಡಿ ನಿರ್ಮಿಸಲಾಗಿದೆ.ಇದನ್ನು ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ 2020ಆಗಸ್ಟ್ ತಿಂಗಳಿಂದ ಚಿಕಿತ್ಸೆ ನೀಡುವ ದೃಷ್ಟಿಯಿಂದ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ವಿವರಿಸಿದರು. ಈ ಆಸ್ಪತ್ರೆಯಲ್ಲಿ 06 ಮಾಡರ್ನ್ ಒಟಿಗಳು,ಎರಡು ಕನ್ವೆನ್ಷನ್ ಗಳಿವೆ. ಟ್ರಾಮಾಕೇರ್ ಆಸ್ಪತ್ರೆಯಲ್ಲಿ ಅರ್ಥೋಪೆಡಿಕ್(ಹಸ್ತಿ ಚಿಕಿತ್ಸಾ ವಿಭಾಗ),ನ್ಯೂರೋಸರ್ಜರಿ(ನರರೋಗ ಚಿಕಿತ್ಸಾ ವಿಭಾಗ),ಪ್ಲಾಸ್ಟಿಕ್ ಸರ್ಜರಿ(ಸ್ವರೂಪ ಚಿಕಿತ್ಸಾ ವಿಭಾಗ), ಅರವಳಿಕೆ ಶಾಸ್ತ್ರ ವಿಭಾಗಗಳ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಈ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಹೊಂದಿದ್ದು,ಸೇವೆಗಳು ಆರಂಭವಾಗುವುದರಿಂದ ಬಳ್ಳಾರಿ ಸೇರಿದಂತೆ ರಾಜ್ಯ ಹಾಗೂ ಆಂಧ್ರಪ್ರದೇಶ,ತೆಲಂಗಾಣ ಜನರಿಗೆ ಅನುಕೂಲ ಪಡೆಯಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ,ಬುಡಾ ಅಧ್ಯಕ್ಷ ಪಿ.ಪಾಲನ್ನ,ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಮಾಜಿ ಸಂಸದರಾದ ಸಣ್ಣ ಫಕೀರಪ್ಪ, ಜೆ.ಶಾಂತಾ,ಮಾಜಿ ಶಾಸಕ ಸುರೇಶಬಾಬು,ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.