ಬೆಂಗಳೂರು,30 : ಸಿಇಟಿ, ನೀಟ್, ಜೆಇಇ ಮುಂತಾದ ಉನ್ನತ ಹಂತದ ಪರೀಕ್ಷೆಗಳಿಗೆ ಅರ್ಜಿ ತುಂಬುವಾಗ ಅಭ್ಯರ್ಥಿಗಳು ತಪ್ಪು ಮಾಡುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ಆಯಾ ಕಾಲೇಜುಗಳಲ್ಲಿಯೇ ವಿಶೇಷ ತರಬೇತಿ ನೀಡಲು ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಭ್ಯರ್ಥಿಗಳು ಹೆಚ್ಚಾಗಿ ಈ ಅರ್ಜಿಗಳಲ್ಲಿ ವಾರ್ಷಿಕ ಆದಾಯ, ಕೆಟಗರಿ, ಹೆಸರು, ಹುಟ್ಟಿದ ದಿನಾಂಕ, ಕೋರ್ಸ್ ಆಯ್ಕೆ ಮುಂತಾದ ಮಾಹಿತಿಗಳನ್ನು ಭರ್ತಿ ಮಾಡುವಾಗ ತಪ್ಪು ಮಾಡುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಹೆಚ್ಚಿನ ಅರ್ಜಿಗಳು ತಿರಸ್ಕೃತವಾಗುತ್ತಿದ್ದು, ಉನ್ನತ ಶಿಕ್ಷಣದ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಗಮನಿಸಿ `ಗೆಟ್ ಸೆಟ್ ಗೋ’ ಮೂಲಕ ಈ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ.
`ಗೆಟ್ ಸೆಟ್ ಗೋ’ ಮೂಲಕ ಈ ಪರೀಕ್ಷೆಗಳಿಗೆ ಹೆಚ್ಚಾಗಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಸ್ನಾತಕೋತ್ತವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ಇವರಿಗೆ ಈ ತರಬೇತಿಯಿಂದ ಪ್ರಯೋಜನವಾಗಲಿದೆ. ತರಬೇತಿಯ ಜತೆಗೆ ಸಾಮಾಜಿಕ ಮಾಧ್ಯಮಗಳು, ವೆಬ್-ಸೈಟುಗಳು ಮತ್ತು ದಿನಪತ್ರಿಕೆಗಳಲ್ಲಿ ಈ ಅರ್ಜಿ ತುಂಬುವ ಸರಿಯಾದ ವಿಧಾನದ ಬಗ್ಗೆ ವ್ಯಾಪಕವಾಗಿ ಜಾಹೀರಾತನ್ನು ಕೂಡ ನೀಡುವ ಮೂಲಕ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.