ಮುಂದಿನ ವಾರ ದೆಹಲಿಗೆ ಬರುವಂತೆ ಮುಖ್ಯಮಂತ್ರಿಗೆ ಬುಲಾವ್

ಬೆಂಗಳೂರು,ಜನವರಿ,19-ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಬಿಜೆಪಿ ವರಿಷ್ಟರು ಗ್ರೀನ್ ಸಿಗ್ನಲ್ ನೀಡಿದ್ದು ಈ ಸಂಬಂಧ ಚರ್ಚಿಸಲು ಮುಂದಿನ ವಾರ ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಲಾವ್ ನೀಡಿದ್ದಾರೆ. ಬಿಜೆಪಿಯ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ಸಂಪುಟ ಪುನರ್ ರಚನೆಗೆ ವರಿಷ್ಟರ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಮತ್ತು ಸಚಿವರ ಜತೆ ರಹಸ್ಯ ಚರ್ಚೆ ಆರಂಭಿಸಿದ್ದಾರೆ. ಇದರ ಆರಂಬಿಕ ಸುತ್ತಿನಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ರಹಸ್ಯ ಚರ್ಚೆ ನಡೆಸಿದರಲ್ಲದೆ,ಹಾಲಿ ಸಂಪುಟದಿಂದ ಯಾರನ್ನು ಕೈ ಬಿಡಬೇಕು?ಯಾರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಮಾತುಕತೆ ನಡೆಸಿದರು. ಹಾಲಿ ಸಂಪುಟದಲ್ಲಿರುವ ಎಂಟರಿಂದ ಹತ್ತು ಮಂದಿಯನ್ನು ಕೈ ಬಿಟ್ಟು,ಹನ್ನೆರಡರಿಂದ ಹದಿನಾಲ್ಕರಷಷ್ಟು ಮಂದಿಯನ್ನು ಸಂಪುಟಕ್ಕೆ ಹೊಸತಾಗಿ ಸೇರ್ಪಡೆ ಮಾಡಿಕೊಳ್ಳಲು ಬಯಸಲಾಗಿದ್ದು,ಈ ಹೆಸರುಗಳ ಕುರಿತು ಉಭಯ ನಾಯಕರು ಚರ್ಚಿಸಿದರು.

ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆಯ ಬಗ್ಗೆ ಪಕ್ಷದ ವರಿಷ್ಟರ ಜತೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಒತ್ತಿ ಹೇಳಿದರು ಎನ್ನಲಾಗಿದೆ. ಅದೇ ಕಾಲಕ್ಕೆ ಪಕ್ಷದಲ್ಲಿರುವ ಒಂದು ಗುಂಪು ವಿಜಯೇಂದ್ರ ಅವರ ಸೇರ್ಪಡೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದು ವರಿಷ್ಟರ ಜತೆಗೂ ಮಾತುಕತೆ ನಡೆಸಿರುವ ಕುರಿತು ಉಭಯ ನಾಯಕರು ಚರ್ಚಿಸಿದರು ಎಂದು ಉನ್ನತ ಮೂಲಗಳು ಹೇಳಿವೆ. ಇದಾದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ಮಧ್ಯಾಹ್ನ ಚರ್ಚೆ ನಡೆಸಿದರಲ್ಲದೆ,ವರಿಷ್ಟರಿಗೆ ನೀಡುವ ಪಟ್ಟಿಯ ಕುರಿತು ಸಲಹೆ ಪಡೆದರು.

ಹಾಲಿ ಸರ್ಕಾರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ದೊಡ್ಡ ಮಟ್ಟದ ಪ್ರಾತಿನಿಧ್ಯ ನೀಡಲಾಗುತ್ತಿದ್ದು,ಸರ್ಕಾರದ ಬಹುತೇಕ ಅನಿವಾರ್ಯತೆಗಳನ್ನು ಹೊರುವ ಜವಾಬ್ದಾರಿ ನೀಡಲಾಗಿದೆ.ಇದೇ ಕಾರಣಕ್ಕಾಗಿ ಮುಂಬರುವ ಸಂಪುಟ ಪುನರ್ ರಚನೆಯ ವಿಷಯದಲ್ಲಿ ಅವರ ಸಲಹೆಯನ್ನು ಮುಖ್ಯವಾಗಿ ಪರಿಗಣಿಸಲಾಗುತ್ತಿದೆ. ಹಾಲಿ ಸಚಿವ ಸಂಪುಟದಲ್ಲಿರುವ ವಲಸಿಗ ಸಚಿವರ ಪೈಕಿ ಕನಿಷ್ಟ ಮೂರು ಮಂದಿಯನ್ನು ಕೈ ಬಿಡಲು ಚಿಂತನೆ ನಡೆಸಲಾಗಿದ್ದು ಅದರ ಪ್ರಕಾರ ಕೃಷಿ ಸಚಿವ ಬಿ.ಸಿ.ಪಾಟೀಲ್,ಕೆ.ಗೋಪಾಲಯ್ಯ ಮತ್ತು ನಾರಾಯಣಗೌಡರಿಗೆ ಕೊಕ್ ಕೊಡುವ ಸಾಧ್ಯತೆಗಳಿವೆ. ಇದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ,ಎಸ್.ಅಂಗಾರ,ಪ್ರಭು ಚೌಹಾಣ್ ಅವರಿಗೆ ಕೊಕ್ ಕೊಡುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಗ್ರಾಮೌಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ,ವಿ.ಸೋಮಣ್ಣ ಸೇರಿದಂತೆ ಹಲ ಹಿರಿಯ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜಿಸುವ ಸಾಧ್ಯತೆಗಳು ದಟ್ಟವಾಗಿವೆ.

ಇದೇ ರೀತಿ ಮೈಸೂರಿನಿಂದ ಎ.ರಾಮದಾಸ್,ಚಾಮರಾಜನಗರ ಜಿಲ್ಲೆಯಿಂದ ಎನ್.ಮಹೇಶ್,ಕೊಡಗು ಜಿಲ್ಲೆಯಿಂದ ಅಪ್ಪಚ್ಚು ರಂಜನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿಗಳು ಬಯಸಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿ,ಪೂರ್ಣಿಮಾ ಶ್ರೀನಿವಾಸ್,ಎಂ.ಪಿ.ರೇಣುಕಾಚಾರ್ಯ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ. ಹೀಗೆ ಮಂತ್ರಿ ಮಂಡಲದಿಂದ ಯಾರನ್ನು ಕೈ ಬಿಡಬೇಕು?ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು? ಎಂಬ ವಿಷಯದಲ್ಲಿ ಒಮ್ಮತಕ್ಕೆ ಬಂದು,ತದ ನಂತರ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಅವರ ಜತೆಗಿನ ಮಾತುಕತೆಯ ನಂತರ ಮುಂದಿನ ವಾರ ಅವರು ದೆಹಲಿಗೆ ದೌಡಾಯಿಸಲಿದ್ದಾರೆ ಎಂದು ಉನ್ನತ ಮೂಲಗಳು ಸ್ಪಷ್ಟ ಪಡಿಸಿವೆ.

Leave a Comment

Your email address will not be published. Required fields are marked *

Translate »
Scroll to Top