ಕೋವಿಡ್-19 ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು

ದೇವನಹಳ್ಳಿ,ಜ,7 : ಕೋವಿಡ್-19 ಮೂರನೇ ಅಲೆಯ ಮುನ್ಸೂಚನೆಯಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಜೊತೆಯಲ್ಲಿ ಪರೀಕ್ಷೆಗಳ ಹೆಚ್ಚಳ ಹಾಗೂ ಲಸಿಕಾಕರಣವನ್ನು ಮತ್ತಷ್ಟು ವೇಗಗೊಳಿಸುವ ಮೂಲಕ ಕೋವಿಡ್-19 ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಹಾಗೂ ಜಿಲ್ಲಾ ಉಸ್ತುವಾರಿ (ಕೋವಿಡ್) ಸಚಿವರಾದ ಎನ್.ನಾಗರಾಜು (ಎಂ.ಟಿ.ಬಿ) ಅವರು ತಿಳಿಸಿದರು. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಹಾಗೂ ಬೆಳೆಹಾನಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣವು ಶೇ. 95 ರಷ್ಟು ಮೊದಲ ಡೋಸ್ ಹಾಗೂ ಶೇ. 84 ರಷ್ಟು ಎರಡನೇ ಡೋಸ್ ಪ್ರಗತಿಯಾಗಿದ್ದು, ನೂರರಷ್ಟು ಪ್ರಗತಿಯನ್ನು ಶೀಘ್ರವಾಗಿ ಸಾಧಿಸುವಂತೆ ತಿಳಿಸಿದರು. 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ 48865 ಮಕ್ಕಳಿದ್ದು, ಈ ಪೈಕಿ 14536 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಕಾರಣಾಂತರಗಳಿಂದ ಶಾಲೆ ಬಿಟ್ಟ ಮಕ್ಕಳನ್ನು ಸಹಾ ಗುರುತಿಸಿ, ಲಸಿಕೆ ನೀಡಲು ಕ್ರಮವಹಿಸಬೇಕು ಎಂದು ತಿಳಿಸಿದರು.


ಕಳೆದ ಒಂದು ವಾರದಲ್ಲಿ ನೆಲಮಂಗಲ ತಾಲ್ಲೂಕಿನಲ್ಲಿ ಶೇ 1.49, ಹೊಸಕೋಟೆ ‌ತಾಲ್ಲೂಕಿನಲ್ಲಿ ಶೇ.‌0.99, ದೇವನಹಳ್ಳಿ ತಾಲ್ಲೂಕಿನಲ್ಲಿ ಶೇ. 1.01 ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಶೇ. 0.25 ರಷ್ಟು ಕೋವಿಡ್ ಪಾಸಿಟಿವಿಟಿ ದರ ದಾಖಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ‌ ನಿಸರ್ಗ ನಾರಾಯಣಸ್ವಾಮಿ.ಎಲ್.ಎನ್ ಅವರು ಮಾತನಾಡಿ ಹೊರ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ, ದೇವನಹಳ್ಳಿ ಏರ್‌ಪೋರ್ಟ್‌ನಲ್ಲಿ ಕಟ್ಟು ನಿಟ್ಟಿನ‌ ಕ್ರಮ ಕೈಗೊಳ್ಳಲು ತಿಳಿಸಿದರಲ್ಲದೆ, ಮಳೆ ಹಾನಿ ಹಾಗೂ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ವಿಳಂಬ ತೋರದೆ, ಶೀಘ್ರ ಪರಿಹಾರ ನೀಡಲು ತಿಳಿಸಿದರು. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ವೆಂಕಟರಮಣಯ್ಯ ಅವರು ಮಾತನಾಡಿ, ಬಡವರಿಗೆ ಸೌಲಭ್ಯ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದರಲ್ಲದೆ, ಕೋವಿಡ್-19 ಮೂರನೇ ಅಲೆ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಲು ‌ತಿಳಿಸಿದರು. ಅಕಾಲಿಕ ಮಳೆಯಿಂದ ಉಂಟಾದ ಬೆಳೆಹಾನಿ ಹಾಗೂ ಮನೆ ಹಾನಿ ವಿವರ ಹಾಗೂ ಪರಿಹಾರ ವಿತರಣೆ ಕುರಿತು ಸಚಿವರು ಹಾಗೂ ಶಾಸಕರು ಕೇಳಿದಾಗ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮಾತನಾಡಿ, ದೇವನಹಳ್ಳಿ ತಾಲ್ಲೂಕಿನಲ್ಲಿ 2095, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 5135, ಹೊಸಕೋಟೆ ತಾಲ್ಲೂಕಿನಲ್ಲಿ 2025 ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ 1985 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11,240 ಹೆಕ್ಟೇರ್ ವಿಸ್ತೀರ್ಣ ಪ್ರದೇಶದ ಬೆಳೆನಷ್ಟ ಮಾಹಿತಿಯನ್ನು ಈಗಾಗಲೇ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಇಲ್ಲಿಯವರೆಗೂ 14157 ಫಲಾನುಭವಿಗಳಿಗೆ 8391.94 ಹೆಕ್ಟೇರ್ ಪ್ರದೇಶಕ್ಕೆ ರೂ. 6274 ಕೋಟಿ ಹಣ ಸಂದಾಯವಾಗಿದೆ ಎಂದು ತಿಳಿಸಿದರು.


ಮಳೆಯಿಂದಾಗಿ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಒಟ್ಟು 220 ಮನೆಗಳ ವಿವರವನ್ನು ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಪರಿಹಾರ ವಿತರಣೆಯ ಕಾರ್ಯ ಪ್ರಗತಿಯಲ್ಲಿದೆ ಎಂದರು. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಪರೀಕ್ಷೆ ನಡೆಸಲು ನಡೆಸಲಾಗುತ್ತಿದ್ದು, ಹೈ ರಿಸ್ಕ್ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನೆಗಟಿವ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದರಲ್ಲದೆ, ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾದ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಲ್ಲಿ ಬೌರಿಂಗ್ ಹಾಸ್ಪಿಟಲ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವಣ್ಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯ. ಈ.ರವಿಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್ ಸೇರಿದಂತೆ‌ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top