ಬಳ್ಳಾರಿ, ಡಿ.01: ಬಂದಿಗಳು ಕಾರಾಗೃಹದಿಂದ ಹೋರಹೊದ್ಮೆಲೆ ಸುಂದರ ಹಾಗೂ ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿವಿಧ ವೃತ್ತಿಪರ ಕೌಶಲ್ಯಗಳು ಅತ್ಯಂತ ಸಹಕಾರಿಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೈದುಲು ಅಡಾವತ್ ಅವರು ಹೇಳಿದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಂದಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ಯೋಗ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಯಾವುದೇ ಕ್ಷಣಿಕ ಆವೇಶಕ್ಕೊಳಗಾಗಿ ತಪ್ಪು ಮಾಡಿ ಕಾರಾಗೃಹದಕ್ಕೆ ಬಂದಿಗಳಾಗಿ ಜೀವನ ಸವೇಸುತ್ತಿದ್ದೀರಿ;ಸುಮ್ಮನೆ ಕುಳಿತು ಅನಗತ್ಯ ಚಿಂತೆ ಮಾಡುತ್ತಾ ಸಮಯದೂಡುವ ಬದಲು ಟೈಲರಿಂಗ್,ಕಸೂತಿ ಕಲೆ,ಮೋಟಾರ್ ರಿಪೇರಿ,ಪೇಂಟಿಂಗ್,ಎಲೆಕ್ಟ್ರಿಕಲ್ ಸೇರಿದಂತೆ ವಿವಿಧ ರೀತಿಯ ಕೌಶಲ್ಯಗಳ ತರಬೇತಿಯನ್ನು ಪಡೆದುಕೊಂಡು ಕಾರಾಗೃಹದಿಂದ ಹೊರಹೊದ ನಂತರ ಸುಂದರ ಜೀವನ ಕಟ್ಟಿಕೊಳ್ಳಬೇಕು ಮತ್ತು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂದರು.
ಅಪರಾಧ ವೃತ್ತಿ ತ್ಯಜಿಸಿ ಬದುಕು ಕಟ್ಟಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ;ನಿಮಗೆ ಯಾವ ರೀತಿಯ ಕೌಶಲ್ಯದ ತರಬೇತಿ ಅಗತ್ಯವಿದೆಯೋ ತಿಳಿಸಿ ಅದನ್ನು ಸಮರ್ಪಕವಾಗಿ ಒದಗಿಸಲಾಗುವುದು ಮತ್ತು ಶಿಕ್ಷಣ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ಕಾರಾಗೃಹ ಇಲಾಖೆಯ ಉತ್ತರ ವಲಯದ ಉಪಮಹಾನಿರ್ದೇಶಕ ಎನ್.ಸೋಮಶೇಖರ್ ಅವರು ಮಾತನಾಡಿ, ಪ್ರತಿಯೊಬ್ಬ ಬಂದಿಯೂ ಹೊರಗಡೆ ಬಂದ ನಂತರ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಕೌಶಲ್ಯ ತರಬೇತಿಗಳನ್ನು ಕಾರಾಗೃಹ ಇಲಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದು,ಬಳ್ಳಾರಿಯಿಂದಲೇ ಶುರು ಮಾಡಲಾಗಿದೆ ಎಂದರು. ಸುಮ್ಮನೆ ಕುಳಿತುಕೊಳ್ಳಬೇಡಿ:ಅನಗತ್ಯ ಯೋಚನೆಗಳು ಮನದಲ್ಲಿ ಸುಳಿದಾಡುತ್ತವೆ ಎಂದು ಹೇಳಿದ ಸೋಮಶೇಖರ್ ಅವರು ಪ್ರತಿಯೊಬ್ಬ ಬಂದಿಯೂ ತಮಗಿಷ್ಟವಾದ ಕೌಶಲ್ಯಗಳ ತರಬೇತಿ ಪಡೆದುಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೈಹಿಕ,ಮಾನಸಿಕವಾಗಿ ಸದೃಢವಾಗಿರಲು ಯೋಗ ಅತ್ಯಂತ ಸಹಕಾರಿಯಾಗಿದ್ದು,ಆರ್ಟ್ ಆಫ್ ಲಿವಿಂಗ್ ನ ಯೋಗಗುರುಗಳು ಕಲಿಸಿಕೊಡುವ ಯೋಗಾಭ್ಯಾಸಗಳನ್ನು ಕಲಿತುಕೊಳ್ಳಿ ಎಂದರು.
ಈಗಾಗಲೇ ಕಾರಾಗೃಹ ಇಲಾಖೆಯಲ್ಲಿ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಯೋಜನೆ ಆರಂಭಿಸಲಾಗಿದೆ.4 ಮತ್ತು 07ನೇ ತರಗತಿ ಪಾಸಾದವರಿಗೆ ಎಸ್ಸೆಸ್ಸೆಲ್ಸಿ ಪಾಸ್ ಮಾಡಿಕೊಡುವುದಕ್ಕೆ ಅಗತ್ಯ ಸಿದ್ಧತೆಗಳನ್ನು ಒದಗಿಸಲು ನ್ಯಾಷನಲ್ ಇನ್ಸ್ಟಿಟ್ಯೂಟ್ ಒಪನ್ ಸ್ಕೂಲ್ ಮುಂದೆ ಬಂದಿದೆ ಎಂದರು. ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಮಲ್ಲಿಕಾರ್ಜುನಸ್ವಾಮಿ ಅವರು ಮಾತನಾಡಿ, ತಾವು ಹೊರಹೊದ ನಂತರ ಸಮಾಜ ಮತ್ತು ಕುಟುಂಬ ಹೇಗೆ ಹಮ್ಮಿಕೊಳ್ಳುತ್ತದೆ ಎಂಬುದು ಗೊತ್ತಿಲ್ಲ; ಈ ಹಿನ್ನೆಲೆಯಲ್ಲಿ ತಾವು ಆ ಸಂದರ್ಭದಲ್ಲಿ ಯಾರ ಮೇಲೆಯೂ ಅವಲಂಬನೆಯಾಗದೇ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಒಂದು ವೃತ್ತಿಯಲ್ಲಿ ಪರಿಣಿತಿ ಅವಶ್ಯಕ. ಹೀಗಾಗಿ ತಾವು ಇಲ್ಲಿ ಆಯೋಜಿಸಲಾಗುತ್ತಿರುವ ವಿವಿಧ ರೀತಿಯ ಕೌಶಲ್ಯಗಳ ತರಬೇತಿ ಒದಗಿಸಲಾಗುತ್ತಿದ್ದು,ಸದುಪಯೋಗ ಪಡೆದುಕೊಳ್ಳುವಂತೆ ಅವರು ಹೇಳಿದರು. ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ವರುಣ್,ಆರ್ಟ್ ಆಫ್ ಲಿವಿಂಗ್ ನ ಪುಷ್ಪಲತಾ, ಏಶಿಯನ್ ಪೆಂಟ್ ನ ಮಾರ್ಕೆಟಿಂಗ್ ಮ್ಯಾನೇಜರ್ ಚಿರಂಜೀವಿ,ಕೆಎಸ್ಪಿಎಸ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಮಾತನಾಡಿದರು. ಈ ಸಂದರ್ಭದಲ್ಲಿ ಕಾರಾಗೃಹ ಇಲಾಖೆ,ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಿಬ್ಬಂದಿಗಳು ಹಾಗೂ ಇತರರು ಇದ್ದರು.