ಕೊಪ್ಪಳ,: ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಷಯುಕ್ತ ಆಹಾರ ಸೇವಿಸಿ ಅಸ್ವಸ್ಥತೆಗೊಂಡಿದ್ದ ವಿದ್ಯಾರ್ಥಿಗಳ ನಿಲಯಕ್ಕೆ ಸೋಮವಾರ ಭೇಟಿ ನೀಡಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರು ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸುವ ಮೂಲಕ ವಿದ್ಯಾರ್ಥಿಗಳ ಆತಂಕ ದೂರ ಮಾಡಿದರು.
ಭಾನುವಾರ ದಿ. 28 ರಂದು ನಿಡಶೇಸಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಷಯುಕ್ತ ಮತ್ತು ಕಳಪೆ ಆಹಾರ ಸೇವಿಸುವ ಮೂಲಕ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥತೆಗೊಂಡಿದ್ದರು. ನಂತರ ಕುಷ್ಟಗಿ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ವಸತಿ ಶಾಲೆಗೆ ಮರಳಿದ್ದರು. ಈ ಘಟನೆ ಹಿನ್ನೆಲೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡುವುದಲ್ಲದೆ, ಶಾಲೆ ಅವ್ಯವಸ್ಥೆಯ ಕುರಿತು ಸೂಚನೆ ನೀಡಿ, ಇನ್ನೊಮ್ಮೆ ಇಂತಹ ಅಹಿತಕರ ಘಟನೆ ಜರುಗದಂತೆ ತಾಕೀತು ಮಾಡಿದ್ದಲ್ಲದೆ, ಕ್ರಮ ಬದ್ದವಾಗಿ ಆಹಾರ ಪದ್ಧತಿ ನಿಯಮ ಪಾಲಿಸುವಂತೆ ಪ್ರಾಚಾರ್ಯರು ಸೇರಿದಂತೆ ಸಿಬ್ಬಂದಿ ವರ್ಗದವರಿಗೆ ಹಾಗೂ ಅಡುಗೆದಾರರಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿ, ತಾವೇ ಖುದ್ದಾಗಿ ವಿದ್ಯಾರ್ಥಿಗಳ ಜೊತೆ ಉಪಹಾರ ಸೇವಿಸಿದರು.
ವರದಿ : ಶಿವಕುಮಾರ್ ಹಿರೇಮಠ, ಕೊಪ್ಪಳ.