ಸಮಾಜಸೇವೆಯ ಮೂಲಕ ಪುನೀತ್ ಗೆ ಗೌರವ ಸಮರ್ಪಣೆ

ದೇವನಹಳ್ಳಿ:ತಾನು ಬದುಕಿದ್ದಾಗ ಪುನೀತ್ ಸಮಾಜ ಸೇವೆಯ ಮೂಲಕ ಆತ್ಮ ತೃಪ್ತಿ ಹೊಂದುತ್ತಿದ್ದು, ಅವರ ಮರಣದ ನಂತರವು ಅವರ ಸವಿ ನೆನಪಿನಲ್ಲಿ ಸಮಾಜಮುಖಿ ಸೇವೆಗಳನ್ನು ಮಾಡುವ ಮೂಲಕ ಪುನೀತ್ ಅವರ ಆತ್ಮ ಸದಾ ಸಂತೃಪ್ತ ವಾಗಿರಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶಿವ ಗಣೇಶ ವೃತ್ತದಲ್ಲಿ ವಿಜಯಪುರ ಹುಡುಗರು ಹಾಗೂ ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 11ನೇ ದಿನದ ಪುಣ್ಯಸ್ಮರಣೆಯ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮೇಣದ ಬತ್ತಿ ಹಚ್ಚಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಯುವಪೀಳಿಗೆಗೆ ಮಾದರಿಯಾದ ಪುನೀತ್ ರಾಜ್ ಕುಮಾರ್ ಹಾದಿಯಲ್ಲಿ ಇಂದಿನ ಯುವಕರು ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ಮಾತನಾಡಿ, ನೆಚ್ಚಿನ ನಾಯಕ ಪುನೀತ್ ಕುಮಾರ್ ಅವರ ಸ್ಮರಣೆಯ ಅಂಗವಾಗಿ ಇಲ್ಲಿನ ಯುವಕರು ರಕ್ತ ಶಿಬಿರದಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದು ಇತರರಿಗೆ ಮಾದರಿ ಜತೆಗೆ ಯುವ ಸಮೂಹಕ್ಕೆ ಸ್ಪೂರ್ತಿ ತುಂಬುವ ಕೆಲಸ. ರಕ್ತದಾನ ಶಿಬಿರದ ಜೊತೆ ಅಂಗಾಗ ದಾನದ ಬಗ್ಗೆಯೂ ಜಾಗೃತಿ ಮೂಡಿಸಲಿ. ಪುನೀತ್ ಅವರು ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದು ತಿಳಿಸಿದರು.ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ ಮಾಡುತ್ತಿರುವ ಸಮಾಜ ಮುಖಿ ಕಾರ್ಯಗಳು ಅವರ ಆತ್ಮಕ್ಕೆ ಶಾಂತಿಯನ್ನು ತಂದುಕೊಡುತ್ತದೆ. ಪುನೀತ್ ತಮ್ಮ ನೇತ್ರದಾನದಿಂದ ನಾಲ್ವರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಅದೇ ರೀತಿ ಕಿಡ್ನಿ ದಾನದ ಬಗ್ಗೆ ಯೂ ಜನರಲ್ಲಿ ಜಾಗೃತಿ ಮೂಡಿಸಬೇಕು. ಬಹಳಷ್ಟು ಚಿಕ್ಕ ವಯಸ್ಸಿನ ಮಕ್ಕಳು ಕಿಡ್ನಿ ಸಮಸ್ಯೆ ಇಂದ ಬಳಲುತ್ತಿದ್ದು, ರೋಗಿಗಳು ಮತ್ತು ದಾನಿಗಳು ಇಬ್ಬರಿಗೂ ಅರಿವನ್ನು ಮೂಡಿಸುವ ಕೆಲಸ ಈ ಯುವ ಸಮೂಹದಿಂದ ಆಗಲಿ ಎಂದು ತಿಳಿಸಿದರು.

ಜೆಡಿಎಸ್ ಟೌನ್ ಅಧ್ಯಕ್ಷ ಎಸ್. ಭಾಸ್ಕರ್ ಮಾತನಾಡಿ, ಇಡೀ ದೇಶವೇ ರಾಜ್ ಕುಮಾರ್ ಅವರನ್ನು ಕೊಂಡಾಡಿತ್ತು. ಅವರ ನಟನೆ ಸರಳತನವನ್ನು ಮೆಚ್ಚಿಕೊಂಡಿತ್ತು. ಇಂದು ಅವರ ಪುತ್ರ ಪುನೀತ್ ರನ್ನು ಇಡೀ ಪ್ರಪಂಚವೇ ಕೊಂಡಾಡಿದೆ. ಅವರ ದಾನಧರ್ಮಗಳು, ಮಾನವೀಯತೆ ಸಮಾಜಕ್ಕೆ ಮಾದರಿಯಾಗಿದೆ‌‌. ಆದರೆ ಅವರ ಅಗಲಿಕೆ ಬಹಳಷ್ಟು ನೋವನ್ನು ತಂದಿದ್ದು ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ಇನ್ನು ಮುಂದೆ ಅವರ ಅಭಿಮಾನಿಗಳು, ಕನ್ನಡಿಗರು ಮಾಡಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.ರಕ್ತದಾನ ಶಿಬಿರದಲ್ಲಿ 111 ಯೂನಿಟ್ ರಕ್ತ ಶೇಖರಣೆಯಾಯಿತು. ಇದೇ ಸಂದರ್ಭದಲ್ಲಿ ಬಹಳಷ್ಟು ಯುವಕರು ನೇತ್ರದಾನ ಮತ್ತು ದೇಹದಾನ ಮಾಡಲು ಹೆಸರು ನೊಂದಾಯಿಸಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೊಡಗುರ್ಕಿ ಮಂಜುನಾಥ್, ಬಿದಲೂರು ವಿಎಸ್ ಎಸ್ ಎನ್ ಅಧ್ಯಕ್ಷ ಮಹೇಶ್, ಭಾರತೀಯ ಜನ ಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ಸಿ.ಮುನಿಯಪ್ಪ, ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್, ವ್ಯವಸ್ಥಾಪಕ ಅಂಜನೇಯಲು, ಪುರಸಭಾ ಉಪಾಧ್ಯಕ್ಷ ಎಂ.ಕೇಶವಪ್ಪ, ಪುರಸಭಾ ಮಾಜಿ ಸದಸ್ಯ ಭಾಸ್ಕರ್, ಸಂಪತ್ ಕುಮಾರ್, ಪುರಸಭಾ ಸದಸ್ಯ ರವಿ, ಮುಖಂಡರಾದ ಕೆ.ಎಂ.ಮಧು, ಮಂಜುನಾಥ್, ಮಹೇಶ್, ಖಾದಿ ಬೋರ್ಡ್ ಸದಸ್ಯ ಸೈಫುಲ್ಲಾ, ಡಾ.ವಿ.ಪ್ರಶಾಂತ, ಸಾರ್ವಜನಿಕ ಸಂಪರ್ಕ ಕೇಂದ್ರದ ಸಂಸ್ಥಾಪಕ ಸಹದೇಶ್, ಅರ್ಜುನ್, ಪ್ರವೀಣ್ ಹಾಗೂ ವಿಜಯಪುರ ಹುಡುಗರ ತಂಡ ಇದ್ದರು.

Leave a Comment

Your email address will not be published. Required fields are marked *

Translate »
Scroll to Top