ದೇವನಹಳ್ಳಿ: ಸಂಕಟ ಇರುವವರು ತಕ್ಷಣ ನೆನೆಸುವ ದೇವರು ವೆಂಕಟರಮಣ. ದೇವರನ್ನು ನಂಬಿ ಮಾಡುವ ಕಾರ್ಯ ಎಂದಿಗೂ ಆತ್ಮಬಲದ ಜೊತೆ ಆಧ್ಯಾತ್ಮಿಕ ಬಲ ನೀಡುತ್ತದೆ ಎಂದು ಕುಣಿಗಲ್ ನ ತಿರುಮಲ ತಿರುಪತಿ ಪಾದಯಾತ್ರೆ ಸಮಿತಿಯ ಸಂಚಾಲಕ ಬಲರಾಮ್ ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಕೃಷಿ ಇಲಾಖೆ ಪಕ್ಕದ ಆವರಣದಲ್ಲಿ ಪಾದಯಾತ್ರಿಗಳಿಗಾಗಿ ಏರ್ಪಡಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅ. 19 ನೇ ತಾರೀಖು ಕುಣಿಗಲ್ ನಿಂದ ಕಾಲ್ನಡಿಗೆಯಲ್ಲಿ ಹೊರಟು ಅ. 27 ರಂದು ತಿರುಪತಿ ತಲುಪಲಿದ್ದೇವೆ.
ಕಷ್ಟ ಪಟ್ಟು ಭಗವಂತನ ಸೇವೆ ಮಾಡಿದರೆ ದೇವರು ಒಲಿಯುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ. ಅದೇ ರೀತಿ ಪಾದಯಾತ್ರೆ ಮಾಡುವ ಮೂಲಕ ಭಕ್ತಾದಿಗಳಿಗೆ ಪುಣ್ಯ ಸಂಪಾದಿಸುವ ಮಾರ್ಗಕ್ಕೆ ನಾವು ಅವಕಾಶ ಮಾಡಿಕೊಡುತ್ತಿದ್ದೇವೆ. 15 ವಯಸ್ಸಿನಿಂದ 85 ವಯಸ್ಸಿನವರೆಗೂ ಸುಮಾರು 2 ಸಾವಿರ ಜನ ಈ ಪಾದಯಾತ್ರೆ ಯಲ್ಲಿ ಭಾಗವಹಿಸಿದ್ದಾರೆ. ಇಷ್ಟು ಜನರಿಗೆ ಮಧ್ಯಾನದ ಊಟದ ವ್ಯವಸ್ಥೆಗೆ ಬಲಮುರಿ ಶ್ರೀನಿವಾಸ್ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹಯೋಗ ನೀಡಿದ್ದಾರೆ. 2 ಸಾವಿರ ಜನರಲ್ಲಿ ಕೇವಲ 700 ಜನರಿಗೆ ಆನ್ ಲೈನ್ ಬುಕಿಂಗ್ ಆಗಿದ್ದು, ಆಂಧ್ರ ಮುಖ್ಯಮಂತ್ರಿ ಗಳ ಕಾರ್ಯದರ್ಶಿ ನಮಗೆ ಈ ವಿಚಾರದಲ್ಲಿ ಸಹಕರಿಸಿ ಎಲ್ಲರಿಗೂ ದರ್ಶನದ ಭಾಗ್ಯ ಕರುಣಿಸಿದ್ದಾರೆ ಎಂದು ತಿಳಿಸಿದರು.
ಪುರಸಭಾ ಮಾಜಿ ಸದಸ್ಯ
ಬಲಮುರಿ ಶ್ರೀನಿವಾಸ್ ಮಾತನಾಡಿ, ಕುಣಿಗಲ್ ನಿಂದ ಕಾಲ್ನಡಿಗೆಯಲ್ಲಿ ತಿರುಪತಿಗೆ ಹೋಗುವ ಭಕ್ತಾದಿಗಳು ವಿಜಯಪುರ ಮಾರ್ಗವಾಗಿ ಹೋಗುತ್ತಾರೆ. ಸುಮಾರು 14 ವರ್ಷಗಳಿಂದಲೂ ಇವರ ಪಾದಯಾತ್ರೆ ನಿರಂತರವಾಗಿ ಸಾಗಿದ್ದು, ಈ ಪಾದಯಾತ್ರೆಯಲ್ಲಿ 2 ಸಾವಿರ ಮಂದಿ ಪಾಲ್ಗೊಳುವುದು ನಿಜಕ್ಕೂ ವಿಶೇಷ. ಯಾತ್ರಾರ್ಥಿಗಳ ತಂಡವನ್ನು ನಿಭಾಯಿಸುವಲ್ಲಿ ಬಲರಾಮ್ ನೇತೃತ್ವ ವಹಿಸಿದ್ದು, ಅವರ ಈ ಧಾರ್ಮಿಕ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.