ದೇವನಹಳ್ಳಿ: ಕೆಲವೊಂದು ಪರಿಸ್ಥಿತಿಗಳಲ್ಲಿ ಕುಟುಂಬದವರ ಅಲಕ್ಷದಿಂದ ತೊಂದರೆಗೊಳಗಾಗಿರುವ ಹಿರಿಯ ನಾಗರಿಕರುಗಳ ಸಮಸ್ಯೆಗಳಿಗೆ ಅಧಿಕಾರಿ ವರ್ಗ ಕೂಡಲೇ ಸ್ಪಂದಿಸುವಂತಾಗಬೇಕೆಂದು, ಬೆಂ.ಗ್ರಾ.ಜಿಲ್ಲಾಧಿಕಾರಿ ಶ್ರೀನಿವಾಸ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣ ಸಮೀಪದ ಚಂದೇನಹಳ್ಳಿ ಗೇಟ್ ಬಳಿಯ ಸರ್ವೋದಯ ಸೇವಾ ಸಂಸ್ಥೆಯಲ್ಲಿ ವಿಶ್ವ ಹಿರಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,
ಸರ್ವೋದಯ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ 100 ಕ್ಕೂ ಹೆಚ್ಚು ಮಂದಿ ಹಿರಿಯರು, ಅಂಗವಿಕಲರು, ಬುದ್ದಿಮಾಂದ್ಯರುಗಳಿಗೆ ಸರಕಾರದ ವತಿಯಿಂದ ನೀಡಲಾಗುವ ಮಾಸಾಶನ(ಪಿಂಚಣಿ) ಕೂಡಲೇ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.
ಸಮಸ್ಯೆ ಆಲಿಸಿ ಗದ್ಗದಿತರಾದ ಜಿಲ್ಲಾಧಿಕಾರಿ : ಸುಮಾರು 3 ಗಂಟೆಗಳ ಕಾಲ ಹಿರಿಯರು, ಬುದ್ದಿಮಾಂದ್ಯರು, ಹಾಗೂ ಸಮಾಜದಿಂದ ತೊಂದರೆಗೊಳಗಾದ ಮಹಿಳೆಯರ ಬಳಿ ಸಮಾಲೋಚನೆ ನಡೆಸಿ, ಸಮಸ್ಯೆಗಳನ್ನು ಅರಿತ ಜಿಲ್ಲಾಧಿಕಾರಿ ಶ್ರೀನಿವಾಸ್ ಗದ್ಗದಿತರಾಗಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು. ಹಿರಿಯರು ತಮ್ಮ ಮಕ್ಕಳಿಂದ ತೊಂದರೆಗೊಳಗಾಗಿ ಆಸ್ತಿ ಕಳೆದುಕೊಂಡು, ಅತಂತ್ರರಾಗಿದ್ದಲ್ಲಿ ಹಾಗೂ ವೃದ್ದಾಶ್ರಮದಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿದ್ದಲ್ಲಿ ತಮ್ಮ ಗಮನಕ್ಕೆ ತಂದರೆ ಅವರುಗಳ ಸಮಸ್ಯೆಯನ್ನು ಬಗೆಹರಿಸುವುದರೊಂದಿಗೆ ಮಕ್ಕಳಿಂದ ಕಳೆದುಕೊಂಡ ಆಸ್ತಿಯನ್ನು ಮರಳಿ, ಅವರುಗಳಿಗೆ ಕೊಡಿಸಿಕೊಡಲಾಗುವುದೆಂದು ಭರವಸೆ ನೀಡಿದರು.
ಸ್ಥಳದಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಒಂದು ವಾರದೊಳಗೆ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು (ಆಧಾರ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್, ಅಂಗವಿಕಲ, ವೃದ್ದಾಪ್ಯ, ವಿಧವಾ, ಮನಸ್ವಿನಿ, ಮತ್ತಿತರೆ)ಕೂಡಲೇ ಒದಗಿಸಿ ಕೊಡುವಂತಾಗಬೇಕೆಂದು ಸೂಚಿಸಿದರು. ಸರ್ವೋದಯ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ 250 ಕ್ಕೂ ಹೆಚ್ಚು ಮಂದಿಗೆ ಶರಟು, ಪಂಚೆ, ಸೀರೆ, ಮಕ್ಕಳಿಗೆ ಬಟ್ಟೆಗಳು, ಒದಗಿಸಲು ಕ್ರಮ ಕೈಗೊಂಡರು. ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿ, ಪ್ರತಿ ತಿಂಗಳು ಆರೋಗ್ಯ ಇಲಾಖೆಯಿಂದ ಸರ್ವೋದಯ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಅಬಲರ ಆರೋಗ್ಯವನ್ನು ಪರೀಕ್ಷೆ ಮಾಡಬೇಕೆಂದು ಸೂಚಿಸಿದರು.
ಸರ್ವೋದಯ ಸೇವಾ ಸಂಸ್ಥೆಯ ಕಾರ್ಯದರ್ಶಿ ಗೋಪಾಲ್ ರಾವ್ ಮಾತನಾಡಿ, ಸರಕಾರಿ ಆಸ್ಪತ್ರೆಯಲ್ಲಿ ಸಂಸ್ಥೆಯ ವತಿಯಿಂದ ತೆರಳುವ ವೃದ್ದರು, ಅಂಗವಿಕಲರು, ಬುದ್ದಿಮಾಂದ್ಯರು, ಮೊದಲಾದವರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯದೇ, ಸ್ಪಂದನೆ ಸಹ ಇರುವುದಿಲ್ಲ. ವಯಸ್ಸಾದ ನಂತರ ಹಿರಿಯರು ಅಭದ್ರತೆಗೊಳಗಾಗುವುದು ಸರ್ವೇ ಸಾಮಾನ್ಯವಾಗಿದ್ದು, ಇಂದಿನ ಯುವಜನಾಂಗ ಮುಂದೊಂದು ದಿನ ತಾವು ವೃದ್ದರಾಗುತ್ತೇವೆ ಎಂಬುದನ್ನು ಗಮನದಲ್ಲಿರಿಸಿಕೊಂಡು, ಮನೆಗಳಲ್ಲಿನ ತಂದೆ-ತಾಯಿ, ಗುರು-ಹಿರಿಯರ ಬಗ್ಗೆ ಗೌರವ ಭಾವನೆ ಇಟ್ಟುಕೊಂಡು, ಅವರ ಅನಿಸಿಕೆಗಳಿಗೆ ಬೆಲೆ ನೀಡಬೇಕೆಂದು ತಿಳಿಸಿದರು. ತಹಸೀಲ್ದಾರ್ ಅನಿಲ್ ಕುಮಾರ್ ಅರೋಳ್ ಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಯ್, ಡಾ. ಶ್ರೀನಿವಾಸ್, ನಾಡಕಚೇರಿ ಉಪತಹಸೀಲ್ದಾರ್ ಲವಕುಮಾರ್, ಕಂದಾಯ ನಿರೀಕ್ಷಕರಾದ ರಾಜು, ಕಾರ್ಯದರ್ಶಿಗಳಾದ ಸುನಿಲ್, ಮಡಿವಾಳಪ್ಪ, ಮತ್ತು ಸರ್ವೋದಯ ಸೇವಾ ಸಂಸ್ಥೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.