ಬೆಂಗಳೂರು: ಅಧಿಕೃತವಾಗಿ ಕರ್ನಾಟಕದಲ್ಲಿ ಒಟ್ಟು 92 ಪಾಕ್ ಪ್ರಜೆಗಳು ವಾಸವಾಗಿರುವುದು ದೃಢಪಟ್ಟಿದ್ದು, ಅವರಲ್ಲಿ ಕೆಲವರು ಕೇಂದ್ರ ಸರ್ಕಾರದ ಆದೇಶದಂತೆ ಇನ್ನೆರಡು ದಿನಗಳಲ್ಲಿ ಭಾರತವನ್ನೇ ತೊರೆಯಬೇಕಾಗಿದೆ. ನಗರದಲ್ಲಿ 4 ಪಾಕ್ ವಲಸಿಗರಿದ್ದು ರಾಜ್ಯದ ಇತರ ಭಾಗಗಳಲ್ಲಿ ಒಟ್ಟು 88 ಪಾಕಿಸ್ತಾನದ ಪ್ರಜೆಗಳಿದ್ದಾರೆ. ಇವರಲ್ಲಿ 88 ಮಂದಿ ದೀರ್ಘಕಾಲೀನ ಹಾಗೂ ಉಳಿದವರು ಅಲ್ಪ ಕಾಲೀನ ವೀಸಾ ಪಡೆದುಕೊಂಡಿದ್ದಾರೆ.
ಅಲ್ಪ ಕಾಲೀನ ವೀಸಾ ಪಡೆದಿರುವ ಪಾಕ್ ವಲಸಿಗರೂ ಸಹ ಭಾರತ ದೇಶ ತೊರೆಯಲೇಬೇಕಾಗಿರುವುದರಿಂದ ಬೇರೆ ಬೇರೆ ವೀಸಾದಲ್ಲಿ ಕರ್ನಾಟಕ ರಾಜ್ಯಕ್ಕೆ ಬಂದಿರುವ ಪಾಕ್ ವಲಸಿಗರು ನಾಳೆಯೊಳಗೆ ಭಾರತ ತೊರೆಯಬೇಕಾಗಿದೆ. ಇನ್ನು ಮೆಡಿಕಲ್ ವೀಸಾದಲ್ಲಿ ಬಂದಿರುವವರು ಏಪ್ರಿಲ್ 27 ರಂದು ದೇಶ ಬಿಡಬೇಕಾಗಿದೆ. ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿರುವ 92 ಪಾಕ್ ಪ್ರಜೆಗಳು ಪಾಸ್‌ಪೋರ್ಟ್ ಹೊಂದಿದ್ದು ಅಧಿಕೃತವಾಗಿ ಕರ್ನಾಟಕದಲ್ಲಿ ನೆಲೆಸಿರುವುದು ಪತ್ತೆಯಾಗಿದೆ.
ಈ ಎಲ್ಲಾ ಪಾಕ್ ವಲಸಿಗರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿದ್ದು, ನಿಗದಿತ ಅವಧಿಯೊಳಗೆ ಭಾರತ ತೊರೆದು ಹೋಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದೇ ರೀತಿ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿರುವ ನಾಲ್ವರು ಪಾಕ್ ವಲಸಿಗರಿಗೂ ನೋಟೀಸ್ ಜಾರಿ ಮಾಡಲಾಗಿದೆ. ಈಗ ಪತ್ತೆಯಾಗಿರುವ 92 ಮಂದಿಯೂ ಅಧಿಕೃತ ವಲಸೆಗಾರರಾಗಿದ್ದಾರೆ. ಆದರೆ, ಅಕ್ರಮವಾಗಿ ಕರ್ನಾಟಕ ರಾಜ್ಯದಲ್ಲಿ ಬೀಡುಬಿಟ್ಟಿರುವ ಅಕ್ರಮ ಪಾಕಿಸ್ತಾನದ ವಲಸಿಗರ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ, ಮುಂದಿನ ದಿನಗಳಲ್ಲಿ ಅವರನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ರಾಜ್ಯದ ಕೆಲವು ಮುಸ್ಲಿಂ ಕುಟುಂಬಗಳು ಹಲವು ವರ್ಷಗಳಿಂದ ಪಾಕಿಸ್ತಾನದ ಕುಟುಂಬಗಳ ಜತೆ ವೈವಾಹಿಕ ಸಂಬಂಧ ಹೊಂದಿವೆ. ಹೀಗಾಗಿ ಕರ್ನಾಟಕ ರಾಜ್ಯದಲ್ಲಿನ 88 ಮಂದಿ ಪಾಕ್ ಪ್ರಜೆಗಳಿಗೆ ವೈವಾಹಿಕ ಸಂಬಂಧ ಇದೆ. ಇವರುಗಳು ಲಾಂಗ್ ಟರ್ಮ್ ವೀಸಾಗಳನ್ನು ಪಡೆದಿದ್ದಾರೆಂದು ತಿಳಿದುಬಂದಿದೆ. ಶೈಕ್ಷಣಿಕ ವೀಸಾ ಮೇಲೆ ಬಂದಿರುವ ಪಾಕ್ ವಿದ್ಯಾರ್ಥಿಯೊಬ್ಬರು ದಾವಣಗೆರೆಯ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬೆಂಗಳೂರು ನಗರದ ಬಸವನಗುಡಿ, ಮೈಸೂರು, ಮಂಗಳೂರು, ಭಟ್ಕಳ ಸೇರಿದಂತೆ ಕರ್ನಾಟಕದ ವಿವಿಧ ಕಡೆ ಈ 88 ಮಂದಿ ಪಾಕಿಸ್ತಾನದ ಪ್ರಜೆಗಳು ವಾಸವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಪಾಕಿಸ್ತಾನಿಗಳಿದ್ದು, ಅವರಲ್ಲಿ ಕೆಲವು ಪಾಕ್ ಮಹಿಳೆಯರು ಸ್ಥಳೀಯ ಯುವಕರನ್ನು ವಿವಾಹವಾಗಿದ್ದಾರೆ. ಅವರಿಗೆ ಮಕ್ಕಳು ಇರುವುದರಿಂದ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಇಲ್ಲಿನ ಪಾಕ್ ಪ್ರಜೆಗಳಿಗೆ ಅನ್ವಯವಾಗುವುದಿಲ್ಲ ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದ್ದಾರೆ.
ಕಾರಣವೇನು?
ಮಿನಿ ಸ್ಪಿಜರ್‌ಲ್ಯಾಂಡ್ ಖ್ಯಾತಿಯ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು 26 ಮಂದಿ ಅಮಾಯಕ ಹಿಂದೂ ಪ್ರವಾಸಿಗರನ್ನು ಗುಂಡಿಟ್ಟು ಕೊಂದ ಘಟನೆಯ ನಂತರ ನೆರೆಯ ಪಾಕಿಸ್ತಾನದ ವಿರುದ್ಧ ಭಾರತ ಸರ್ಕಾರ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಅದರಲ್ಲಿ ದೇಶದಲ್ಲಿ ನೆಲೆಸಿರುವ ಎಲ್ಲ ರೀತಿಯ ಪಾಕ್ ಪ್ರಜೆಗಳೂ ಕೂಡಲೇ ಭಾರತ ಬಿಟ್ಟು ಹೋಗುವಂತೆ ಸೂಚನೆ ನೀಡಲಾಗಿದೆ.
ಅದೇ ರೀತಿ ಭಾರತ ದೇಶದ ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿರುವುದರಿಂದ ಆಯಾ ರಾಜ್ಯಗಳಲ್ಲಿ ನೆಲೆಸಿರುವ ಪಾಕ್ ಪ್ರಜೆಗಳಿಗೆ ದೇಶ ತೊರೆಯುವಂತೆ ನೋಟೀಸ್ ನೀಡಲಾಗುತ್ತಿದೆ.