ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಬೆಂಗಳೂರು: ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ. 85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ತಿಳಿಸಿದರು. ಮಲ್ಲೇಶ್ವರದಲ್ಲಿರುವ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಗುರುವಾರ (ಮೇ 19) ಸುದ್ದಿಗೋಷ್ಠಿಯಲ್ಲಿ ಪರೀಕ್ಷೆ ಫಲಿತಾಂಶದ ಕುರಿತು ಸಚಿವರು ಮಾಹಿತಿ ನೀಡಿದರು. ಪರೀಕ್ಷೆಗೆ ಹಾಜರಾದ 8,53,436 ವಿದ್ಯಾರ್ಥಿಗಳ ಪೈಕಿ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ.90.29ರಷ್ಟು ಹಾಗೂ ಬಾಲಕರ ಉತ್ತೀರ್ಣ ಪ್ರಮಾಣ ಶೇ.81.30ರಷ್ಟಿದೆ. ಒಟ್ಟು 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ’ ಎಂದು ಸಚಿವರು ತಿಳಿಸಿದರು. ಈ ಬಾರಿಯ ಫಲಿತಾಂಶದಲ್ಲಿ ಉತ್ತೀರ್ಣರಾದವರ ಶೇಕಡವಾರು ಪ್ರಮಾಣ ಕಳೆದ ಹತ್ತು ವರ್ಷಗಳಲ್ಲಿ (2020-21 ಹೊರತುಪಡಿಸಿ) ಅತ್ಯಧಿಕ. ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಪೈಕಿ 3,920 ಶಾಲೆಗಳಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಶೇ.100ರಷ್ಟು ಬಂದಿದೆ. 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ’ ಎಂದು ಸಚಿವರು ಮಾಹಿತಿ ನೀಡಿದರು.

‘ಶೂನ್ಯ ಫಲಿತಾಂಶ ಬಂದಿರುವ ಶಾಲೆಗಳು ಹಾಗೂ ಉತ್ತೀರ್ಣ ಪ್ರಮಾಣ ಕಡಿಮೆ ಇರುವ ಶಾಲೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರೋಪಾಯಗಳನ್ನು ಕಂಡು ಹಿಡಿಯಲಾಗುತ್ತದೆ’ ಎಂದು ಸಚಿವರು ತಿಳಿಸಿದರು. ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳು ‘ಎ’ ದರ್ಜೆಯ (ಶೇ.75-100) ಫಲಿತಾಂಶ ಪಡೆದಿವೆ. ಯಾದಗಿರಿ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳು ‘ಬಿ’ ದರ್ಜೆಯ (ಶೇ.60ರಿಂದ ಶೇ.75ರ ಒಳಗೆ) ಫಲಿತಾಂಶ ಪಡೆದಿವೆ’ ಎಂದು ಸಚಿವರು ತಿಳಿಸಿದರು. ಮುಂದಿನ ತಿಂಗಳು (ಜೂನ್-2022) ಪೂರಕ ಪರೀಕ್ಷೆ ನಡೆಯಲಿವೆ. ಇಲಾಖೆಯ ವೆಬ್‌ಸೈಟಿಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಪೂರಕ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಮಂಡಳಿಯ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ’ ಎಂದು ಸಚಿವರು ತಿಳಿಸಿದರು.‘ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು. ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳು ಎದೆಗುಂದಬೇಕಿಲ್ಲ. ಮತ್ತೆ ಪರೀಕ್ಷೆ ಬರೆದು ಉತ್ತೀರ್ಣವಾಗುವ ಅವಕಾಶಗಳು ಇವೆ. ಧೈರ್ಯದಿಂದ ಇರಬೇಕು. ಪರೀಕ್ಷೆಗಿಂತ ನಮ್ಮ ಜೀವನ ಮುಖ್ಯ. ಹೀಗಾಗಿ, ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದವರೂ ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿರುವವರ ಸಂಖ್ಯೆ ಅಪಾರ. ಹೀಗಾಗಿ, ಮುಂದಿನ ಪರೀಕ್ಷೆ ಮತ್ತು ಜೀವನದ ಕುರಿತು ಧನಾತ್ಮಕವಾಗಿರಿ’ ಎಂದು ಹಿನ್ನಡೆ ಅನುಭವಿಸಿರುವ ವಿದ್ಯಾರ್ಥಿಗಳಿಗೆ ಸಚಿವ ನಾಗೇಶ್ ಅವರು ಧೈರ್ಯ ಮತ್ತು ಹಿತ ನುಡಿಗಳನ್ನು ಹೇಳಿದರು.

‘ಪರೀಕ್ಷೆಯಲ್ಲಿ ಅನ್ನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳನ್ನು ಆಯಾ ಶಾಲೆಗಳ ಶಿಕ್ಷಕರು ಸಂಪರ್ಕಿಸಿ ಅವರಿಗೆ ಧೈರ್ಯ, ವಿಶ್ವಾಸ ತುಂಬುವ ಜೊತೆಗೆ ಪೂರಕ ಪರೀಕ್ಷೆ ಬರೆಯಲು ನೆರವಾಗಬೇಕು. ಓದು ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಸ್ಪೂರ್ತಿ ತುಂಬಬೇಕು’ ಎಂದು ಶಿಕ್ಷಕರಿಗೆ ಸಚಿವ ನಾಗೇಶ್ ಅವರು ಸಲಹೆ ನೀಡಿದರು.

Leave a Comment

Your email address will not be published. Required fields are marked *

Translate »
Scroll to Top