ಶೇ 80 ಕಮಿಷನ್‍ನ ಕಾಂಗ್ರೆಸ್ ಸರಕಾರಕ್ಕೆ ಪ್ರಜ್ಞಾವಂತ ಮತದಾರರಿಂದ ತಕ್ಕ ಪಾಠ: ವಿಜಯೇಂದ್ರ ವಿಶ್ವಾಸ

ಬೆಂಗಳೂರು: ಗುಡುಗು, ಸಿಡಿಲು, ಮಳೆ, ಬಿರುಗಾಳಿ ಏನೇ ಬಂದರೂ ಪಕ್ಷದ ಹಿರಿಯರಾದ ಯಡಿಯೂರಪ್ಪ, ಈಶ್ವರಪ್ಪ ಮತ್ತಿತರ ರಾಜ್ಯದ ಎಲ್ಲ ಹಿರಿಯರ ಆಶೀರ್ವಾದ, ಕಾರ್ಯಕರ್ತರ ನೆರವಿನಿಂದ ಬಿಜೆಪಿ ಎಂಬ ವಿಮಾನವನ್ನು ಸೇಫ್ ಆಗಿ ಲ್ಯಾಂಡ್ ಮಾಡಲಿದ್ದೇನೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ತಿಳಿಸಿದರು.

ರಾಜ್ಯಾಧ್ಯಕ್ಷರಾದ ಬಳಿಕ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ್ದ ಅವರು ಶಿವಮೊಗ್ಗದಲ್ಲಿ ಕಾರ್ಯಕರ್ತರು ಮತ್ತು ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನಾನು ನನ್ನ 49 ವರ್ಷಕ್ಕೆ ರಾಜ್ಯಾಧ್ಯಕ್ಷ ಆಗಿದ್ದೇನೆ. ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಪರಿಶ್ರಮದೊಂದಿಗೆ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿ, ರಾಜ್ಯದ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ಮೂಲಕ ಮೋದಿಜೀ ಅವರ ಕೈಗಳನ್ನು ಬಲಪಡಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಅಧಿವೇಶನದ ವೇಳೆ ಬೆಳಗಾವಿ ಭಾಗದ ಜಿಲ್ಲೆಗಳಿಗೆ ಭೇಟಿ ಕೊಡುತ್ತೇನೆ. ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ರಾಜ್ಯದ ಯುವಕರು, ತಾಯಂದಿರು ಸೇರಿ ಎಲ್ಲರೂ ನನಗೆ ಆಶೀರ್ವಾದ ಮಾಡುತ್ತಿದ್ದಾರೆ. ವಿಜಯೇಂದ್ರನಲ್ಲಿ ಯಡಿಯೂರಪ್ಪ ಅವರನ್ನು ಜನರು ನೋಡುತ್ತಿದ್ದಾರೆ. ಆದ್ದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು.

ಕೇಂದ್ರದ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜೀ, ಪ್ರಧಾನಿ ನರೇಂದ್ರ ಮೋದಿಜೀ, ಅಮಿತ್ ಶಾ ಜೀ, ಸಂತೋಷ್ ಅವರು ನನ್ನನ್ನು ಈ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಸಂಘ ಪರಿವಾರದ ಹಿರಿಯರ ಆಶೀರ್ವಾದ, ಯಡಿಯೂರಪ್ಪ ಮತ್ತು ಹಿರಿಯರ ಆಶೀರ್ವಾದ, ಕಾರ್ಯಕರ್ತರ ಪ್ರೀತಿ, ವಿಶ್ವಾಸ, ಮತದಾರರ ಅಶೀರ್ವಾದ ನನ್ನ ಮೇಲಿದೆ ಎಂದು ತಿಳಿಸಿದರು.

ನಾನು ಕೂಡ ಈ ಹೊಣೆಯನ್ನು ನಿರೀಕ್ಷೆ ಮಾಡಿರಲಿಲ್ಲ. 18 ದಿನಗಳ ಹಿಂದೆ ಈ ಮಹತ್ತರ ಜವಾಬ್ದಾರಿ ಕೊಡುವುದಾಗಿ ನಡ್ಡಾಜೀ ಫೋನ್ ಕರೆಯ ಮೂಲಕ ತಿಳಿಸಿದ್ದರು. ಅದು ಗಾಬರಿ, ಸಂತೋಷ, ಹೆಮ್ಮೆಗೆ ಕಾರಣವಾಯಿತು ಎಂದು ವಿವರಿಸಿದರು. ತಕ್ಷಣ ತಂದೆ, ಯಡಿಯೂರಪ್ಪನವರಿಗೆ ಸಿಹಿ ಕೊಟ್ಟುದನ್ನು ನೆನಪಿಸಿಕೊಂಡರು. ತಂದೆಯವರ ಕಣ್ಣಂಚಿನಲ್ಲಿ ಸಂತೃಪ್ತಿಯ ಆನಂದಭಾಷ್ಪ ಬಂದುದನ್ನು ವಿವರಿಸಿದರು.

 

ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಲು ಪ್ರತಿದಿನ ಪ್ರವಾಸ ಮಾಡಲು ತಂದೆ, ಯಡಿಯೂರಪ್ಪ ಅವರು ತಿಳಿಸಿದ್ದಾರೆ ಎಂದರು. ಅಧ್ಯಕ್ಷತೆ ಲಭಿಸಿದ ಮಾರನೇ ದಿನ ಗಾಂಧಿನಗರ ಬೂತ್ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಇದು ಬಿಜೆಪಿಯಲ್ಲಿ ಮಾತ್ರ ನೋಡಲು ಸಾಧ್ಯ ಎಂದು ತಿಳಿಸಿದರು. ರಾಷ್ಟ್ರೀಯ ಅಧ್ಯಕ್ಷರಿಗೆ ಸಮನಾದ ಗೌರವವನ್ನು ಪಕ್ಷದ ಬೂತ್ ಅಧ್ಯಕ್ಷರಿಗೂ ಕೊಡುವ ಪಕ್ಷ ಬಿಜೆಪಿ ಎಂದು ತಿಳಿಸಿದರು.

ಕಾಂಗ್ರೆಸ್ ಸರಕಾರ ಕೇವಲ 6 ತಿಂಗಳಲ್ಲಿ ಜನಪ್ರಿಯತೆ ಕಳಕೊಂಡಿದೆ. ಜನರು ಈ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇದು ಶೇ 80 ಕಮಿಷನ್‍ನ ಸರಕಾರ. ಈ ಸರಕಾರಕ್ಕೆ ಪ್ರಜ್ಞಾವಂತ ಮತದಾರರು ಪಾಠ ಕಲಿಸುತ್ತಾರೆ ಎಂದು ಸವಾಲೆಸೆದರು.

ಜಾತಿ ಗಣತಿ ಮಾಡಿದ ಕಾಂತರಾಜ್ ವರದಿಯನ್ನು ಕಾತರದಿಂದ ಸ್ವೀಕರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಡಿಸಿಎಂ ಸೇರಿ ಅನೇಕ ಸಮಾಜದವರು ಈ ವರದಿಯ ವಿರುದ್ಧ ಇದ್ದಾರೆ. ಅರೆಬರೆ ಬೆಂದ ಅವೈಜ್ಞಾನಿಕ ವರದಿಯನ್ನು ನೀಡಲಾಗಿದೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು. ಬಿಜೆಪಿ ಜಾತಿಗಣತಿ ವಿರೋಧಿಯಲ್ಲ; ಜಾತಿ ಸಮೀಕ್ಷೆ ನ್ಯಾಯಸಮ್ಮತ ಆಗಿರಲಿ ಎಂದು ತಿಳಿಸಿದರು.

 

ಎಲ್ಲ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗೂಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 28 ಸ್ಥಾನ ಗೆಲ್ಲಲು ಶ್ರಮಿಸಬೇಕು ಎಂದು ತಿಳಿಸಿದರು. ಆ ಮೂಲಕ ಮೋದಿಜೀ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿ ಮಾಡಬೇಕೆಂದು ಕೋರಿದರು.

ತುಂಬಿ ತುಳುಕಿದ ಉತ್ಸಾಹ: ಯಡಿಯೂರಪ್ಪ

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ. ಈ ಸರಕಾರದ ಆಡಳಿತ ವೈಖರಿ, ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಜನಹಿತ ಮರೆತು ಜನಜೀವನದಲ್ಲಿ ಚೆಲ್ಲಾಟವನ್ನು ನಮ್ಮ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿ ತರಾಟೆಗೆ ತೆಗೆದುಕೊಳ್ಳಲಿದ್ದಾರೆ ಎಂದರು.

ಇವತ್ತು ಚುನಾವಣೆ ನಡೆದರೆ ಬಿಜೆಪಿ 130-135 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುವಂಥ ಪರಿಸ್ಥಿತಿ ಇದೆ ಎಂದು ವಿಶ್ಲೇಷಿಸಿದರು. ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜೀ ಅವರು ದೂರವಾಣಿ ಮೂಲಕ ಈ ಆಯ್ಕೆಯನ್ನು ತಿಳಿಸಿದ್ದರು ಎಂದ ಅವರು, ಅನೇಕ ಕಾರಣಗಳಿಂದ ನಮಗೆ ಹಿನ್ನಡೆ ಆಗಿದೆ. ಅದನ್ನು ಸರಿಪಡಿಸಿ ಪಕ್ಷ ಬಲಪಡಿಸಿ, 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ ಎಂದು ವಿಶ್ವಾಸದಿಂದ ತಿಳಿಸಿದರು.

 

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಶಿವಮೊಗ್ಗ ಜಿಲ್ಲೆಯ 3 ಲಕ್ಷ ಮತ್ತು ರಾಜ್ಯದ 1 ಕೋಟಿ ಕಾರ್ಯಕರ್ತರು ವಿಜಯೇಂದ್ರನವರ ಜೊತೆಗೆ ಇದ್ದಾರೆ ಎಂದರು. ವಿಜಯೇಂದ್ರರ ಹೆಸರು ಘೋಷಿಸಿದಾಗ ಕರ್ನಾಟಕದಲ್ಲಿ ಮಿಂಚಿನ ಸಂಚಲನ ಆಯಿತು ಎಂದು ವಿಶ್ಲೇಷಿಸಿದರು. ಈ ಆಯ್ಕೆಗೆ ಕೆಲವೇ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಅವರನ್ನು ಸಮಾಧಾನ ಪಡಿಸುವ ಕೆಲಸ ಆಗಲಿದೆ ಎಂದು ತಿಳಿಸಿದರು.

ಜಮೀರ್ ಅಹ್ಮದ್ ಹೇಳಿಕೆಯನ್ನು ಅವರು ಖಂಡಿಸಿದರು. ಸಂವಿಧಾನದ ಕುರಿತು ಗೌರವ ಇಲ್ಲದಿದ್ದರೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದರು. ಸಿಬಿಐ ಕೇಸ್ ವಾಪಸ್ ಪಡೆದ ನಿಮಗೆ ಸಂವಿಧಾನದ ಕುರಿತು ಗೌರವ ಇದೆಯೇ ಎಂದು ಪ್ರಶ್ನಿಸಿದರು. ಮೋದಿಜೀ ಅವರು ವಿಶ್ವನಾಯಕರಾಗಿ ಬೆಳೆದಿದ್ದಾರೆ ಎಂದು ತಿಳಿಸಿದರು. ರಾಜ್ಯದ 28ಕ್ಕೆ 28 ಸೀಟು ಕೂಡ ಬಿಜೆಪಿ- ಜೆಡಿಎಸ್‍ಗೆ ಸಿಗಲಿದೆ ಎಂದು ಸವಾಲೆಸೆದರು.

ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಯುವ ಮುಖಂಡನನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ನೇಮಿಸಿದ ಪಕ್ಷದ ಕೇಂದ್ರದ ನಾಯಕರಿಗೆ ಧನ್ಯವಾದ ಸಮರ್ಪಿಸಿದರು. ಸಂಘಟನೆಗೆ ಶಕ್ತಿ ತುಂಬುವ ಕಾರ್ಯದಲ್ಲಿ ಯಶ ಸಿಗಲಿ ಎಂದು ಹಾರೈಸಿದರು.

 

ಬಿಜೆಪಿ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ. ಅಭಿವೃದ್ಧಿ ಕೆಲಸ, ಕಾರ್ಯಕರ್ತರ ಶ್ರಮವಿದ್ದರೂ ನಾವು ಕೆಲವೆಡೆ ಗೆಲ್ಲಲಾಗಲಿಲ್ಲ ಎಂದು ವಿವರಿಸಿದರು. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ, ಲೋಕಸಭಾ ಚುನಾವಣೆಯಲ್ಲೂ 28ಕ್ಕೆ 28 ಸ್ಥಾನ ಗೆಲ್ಲಿಸಿ ಕೊಡಿ ಎಂದು ವಿನಂತಿಸಿದರು.

ನಮ್ಮ ವಿರುದ್ಧ ಎಲ್ಲ ರಾಜಕೀಯ ಶಕ್ತಿಗಳು ಒಗ್ಗೂಡಿವೆ. ಮತ್ತೊಮ್ಮೆ ಮೋದಿಜೀ ಅವರು ಪ್ರಧಾನಿಯಾಗಲು ನಮ್ಮ ಕಾರ್ಯಕರ್ತರ ಪರಿಶ್ರಮ, ಜವಾಬ್ದಾರಿ ಇದೀಗ ಇನ್ನೂ ಹೆಚ್ಚಾಗಿದೆ ಎಂದು ನುಡಿದರು. ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ.ಬಿ.ಭಾನುಪ್ರಕಾಶ್ ಅವರು ಅಭಿನಂದನಾ ಭಾಷಣ ಮಾಡಿ, ‘ಎದ್ದು ನಿಲ್ಲು ವೀರ ದೇಶ ಕರೆದಿದೆ’ ಎಂಬ ಹಾಡನ್ನು ನೆನಪಿಸಿದರು. ಮುಖಂಡರಾದ ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಶ್ರೀಮತಿ ಭಾರತಿ ಶೆಟ್ಟಿ ಮತ್ತಿತರರು ವಿಜಯೇಂದ್ರರನ್ನು ಅಭಿನಂದಿಸಿ ಮಾತನಾಡಿದರು.

 

ವಿಭಾಗ ಪ್ರಭಾರಿಗಳು, ಜಿಲ್ಲಾಧ್ಯಕ್ಷ ಮೇಘರಾಜ್, ಶಾಸಕ ಚನ್ನಬಸಪ್ಪ, ಶಾಸಕರು, ವಿಧಾನಪರಿಷತ್ತಿನ ಸದಸ್ಯರು, ಮಾಜಿ ಸಚಿವರು, ಪಕ್ಷದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top