ಬೆಸ್ಕಾಂಗೆ 68,526 ರೂ. ದಂಡ ಪಾವತಿಸಿದ ಹೆಚ್.ಡಿ.ಕುಮಾರಸ್ವಾಮಿ

ದಂಡದಲ್ಲೂ ದೋಷವಿದೆ ಎಂದು ಬೆಸ್ಕಾಂ ವಿರುದ್ಧ ದೂರಿದ ಮಾಜಿ ಸಿಎಂ

ಆರಂಭಕ್ಕೆ ಮುನ್ನ 6 ತಿಂಗಳು ವಿದ್ಯುತ್ ಬಿಲ್ ಕಟ್ಟದ ಲುಲು ಮಾಲ್ ಮಾಹಿತಿ ಬಿಚ್ಚಿಡಿ ಎಂದು ಆಗ್ರಹ

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ವಿಚಕ್ಷಣಾ ದಳ ತಮಗೆ ವಿಧಿಸಿದ್ದ 68,526 ರೂ. ದಂಡವನ್ನು ಪಾವತಿ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಅಲ್ಲದೆ; ಬೆಸ್ಕಾಂ ವಿಧಿಸಿರುವ ದಂಡದ ಮೊತ್ತ ಲೋಪದಿಂದ ಕೂಡಿದ್ದು ಈ ಬಗ್ಗೆ ತಮಗೆ ಸ್ಪಷ್ಟನೆ ಕೊಡಬೇಕು ಎಂದು ಅವರು ಇಂಧನ ಇಲಾಖೆಯನ್ನು ಒತ್ತಾಯ ಮಾಡಿದ್ದಾರೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜೆ.ಪಿ‌.ನಗರದ ತಮ್ಮ ಮನೆಗೆ ಕಂಬದಿಂದ ವಿದ್ಯುತ್ ಪಡೆದಿರುವುದಕ್ಕೆ ಬೆಸ್ಕಾಂ ವಿಚಕ್ಷಣಾ ದಳ ವಿಧಿಸಿರುವ ದಂಡವೇ ಅಕ್ರಮ ಎಂದು ಅವರು ಕುಮಾರಸ್ವಾಮಿ ಅರೋಪ ಮಾಡಿದ್ದಾರೆ.

 

ನನ್ನ ಮನೆಗೆ ನಾನು 33 KV ಅನುಮತಿ ಪಡೆದಿದ್ದೇನೆ. ವಿದ್ಯುತ್ ಕಳವು ಆರೋಪದಲ್ಲಿ 2.5 ಕೆವಿ ವಿದ್ಯುತ್ ಪಡೆಯಲಾಗಿದೆ ಎಂದು ಬೆಸ್ಕಾಂ ಹೇಳಿದೆ. ಅಸಲಿಗೆ 1 ಕೆವಿ ವಿದ್ಯುತ್ ಮಾತ್ರ ನಮ್ಮ ಮನೆಯ ಲೈಟಿಂಗ್ ಗೆ ಬಳಕೆ ಮಾಡಲಾಗಿತ್ತು. ಆದರೂ ಬೆಸ್ಕಾಂ ಅಧಿಕಾರಿಗಳು 2.5 ಕೆವಿ ಅಂತ ಸುಳ್ಳು ಲೆಕ್ಕ ‌ತೋರಿಸಿದ್ದಾರೆ. ಯಾರದ್ದೋ ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನಾನು ಬಳಕೆ ಮಾಡಿರುವುದು 71 ಯುನಿಟ್. ಅದಕ್ಕೆ 3 ಪಟ್ಟು ಫೈನ್ ಅಂದರೂ 2,526 ರೂ. ದಂಡ ಆಗುತ್ತದೆ. ಆದರೆ ಬೆಸ್ಕಾಂನವರು 68 ಸಾವಿರ ದಂಡ ಪಾವತಿ ಮಾಡಲು ಹೇಳಿದೆ. ನನ್ನ ಮನೆಗೆ ಅನುಮತಿ ಪಡೆದಿರೋ 33 ಕೆವಿಗೂ 66 ಸಾವಿರ ಬಿಲ್ ಹಾಕಿ.ಒಟ್ಟಾರೆ 68,526 ಬಿಲ್ ಹಾಕಿದೆ. ನಿಯಮದ ಪ್ರಕಾರ ಬಿಲ್ ಹಾಕದೇ ಹೆಚ್ಚುವರಿ ಬಿಲ್ ಹಾಕಿದೆ. ಮಾಜಿ ಮುಖ್ಯಮಂತ್ರಿ ಒಬ್ಬರಿಗೇ ಹೀಗಾದರೆ ಸಾಮಾನ್ಯ ಜನರ ಕಥೆ ಏನು? ಎಂದು ಅವರು ಪ್ರಶ್ನಿಸಿದರು.

ಈ ಬಗ್ಗೆ ಬೆಸ್ಕಾಂ ನವೆರಿಗೆ ಮರು ಪರಿಶೀಲನಾ ಪತ್ರ ಬರೆದಿದ್ದೇನೆ ಹಾಗೂ ದಂಡವನ್ನೂ ಕಟ್ಟಿದ್ದೇನೆ. ಆದರೆ ಇಷ್ಟು ಬಿಲ್ ಯಾಕೆ ಅಂತ ವಿವರಣೆ ಕೊಡಿ ಎಂದು ಆಕ್ಷೇಪಣೆ ವ್ಯಕ್ತಪಡಿಸಿ ಪತ್ರ ಬರೆದಿದ್ದೇನೆ. ಬೆಸ್ಕಾಂ ವಿಜಿಲೆನ್ಸ್ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದು ನನಗೆ ಗೊತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.

          ದೀಪಾವಳಿ ಹಬ್ಬದ ವೇಳೆ ನಮ್ಮನೆ ಹುಡುಗರು ದೀಪಾಲಂಕಾರ ಮಾಡುವಾಗ ಅಚಾತುರ್ಯ ಆಗಿತ್ತು. ಇದಕ್ಕೆ ನಾನೇ ವಿಷಾದ ವ್ಯಕ್ತಪಡಿಸಿ ದಂಡ ಪಾವತಿ ಮಾಡುವುದಾಗಿ ಹೇಳಿದ್ದೆ. ಅದರಂತೆ ದಂಡ ಪಾವತಿ ಮಾಡಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಯಾರೋ ಹುಡುಗರು ಮಾಡಿದ ತಪ್ಪಿಗೆ ವಿಷಾದ ವ್ಯಕ್ತಪಡಿಸಿ, ಅದರ ಜವಾಬ್ದಾರಿ ನಾನೇ ಹೊತ್ತೆ. ಈಗ ವಿದ್ಯುತ್ ಕಳ್ಳ ಅಂತ ಪಟ್ಟ ಬೇರೆ ಕೊಟ್ಟಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಹೇಳಿಕೆ ಕೊಟ್ಟಿದ್ದರು. ದಂಡದ ಬಿಲ್ ಕೊಟ್ಟರು, ಕಟ್ಟಿದ್ದೇನೆ ಎಂದರು ಕುಮಾರಸ್ವಾಮಿ ಅವರು.

          ಲುಲು ಮಾಲ್ ಗೆ ಬಳಸಿದ್ದ ಬಿಲ್ ಗೆ ದಂಡ ಕಟ್ಟಿದ್ದಾರ?:

ಬೆಂಗಳೂರಿನ ಸುಜಾತ ಬಸ್ ನಿಲ್ದಾಣದ ಬಳಿ ಆಕಾಶದ ಎತ್ತರಕ್ಕೆ ಕಟ್ಟಿರುವ ಲುಲು ಮಾಲ್ ಪ್ರಾರಂಭಕ್ಕೂ ಮುನ್ನ 6 ತಿಂಗಳು ಬಳಕೆ ಮಾಡಿದ ವಿದ್ಯುತ್ ಬಿಲ್ ಬಗ್ಗೆ ಬೆಸ್ಕಾಂ ವಿಚಕ್ಷಣ ದಳ ಮಾಹಿತಿ ನೀಡುತ್ತಾ? ಅದರ ಬಗ್ಗೆ ಇರುವ ಮಾಹಿತಿಯನ್ನು ಅವರು ಬಹಿರಂಗ ಮಾಡುತ್ತಾರಾ? ಎಂದು ಅವರು ಪ್ರಶ್ನೆ ಮಾಡಿದರು.

ಲುಲು ಮಾಲ್ ಆರಂಭಕ್ಕೆ ಮೊದಲು 6 ತಿಂಗಳು ವಿದ್ಯುತ್  ಬಿಲ್ ಕಟ್ಟಲು ಬಿಟ್ಟಿಲ್ಲ. ಹಾಗಾದರೆ, ಅವರು ಎಲ್ಲಿಂದ ವಿದ್ಯುತ್ ಬಳಿಸಿದರು. ಆಕಾಶದಿಂದ ವಿದ್ಯುತ್ ಉತ್ಪಾದನೆ ಮಾಡಿದ್ರಾ ಇವರು. ಇವರ ಯೋಗ್ಯತೆಗೆ ನನ್ನನ್ನು ಕಳ್ಳ ಕಳ್ಳ ಅಂತಾರೆ ಎಂದು ಲುಲು ಮಾಲ್ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಗಂಭೀರ ಆರೋಪ ಮಾಡಿದರು.

 

ಈ ಸಂದರ್ಭದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಸರಕಾರದಿಂದ ನನ್ನ ವಿರುದ್ಧ ರಾಜಕೀಯ ಸೇಡು: ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಬಿಡದಿ ಜಮೀನು, ಜಂತಕಲ್‌ ಮೈನಿಂಗ್‌ ತನಿಖೆ ಮಾಡಿಸಿ ಎಂದು ಸವಾಲು

24 ಎಕರೆ ಕರಾಬ್‌ ಭೂಮಿ ನುಂಗಿದ ಲುಲು ಮಾಲ್;‌ ಶೀಘ್ರವೇ ದಾಖಲೆ ಬಹಿರಂಗ ಮಾಡುವೆ ಎಂದ ಹೆಚ್ಡಿಕೆ

ಈ ಸರಕಾರ ನನ್ನ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಹೊರಟಿದೆ. ಇದಕ್ಕೆಲ್ಲ ಜಗ್ಗುವ ಪೈಕಿ ನಾನಲ್ಲ. ಇದನ್ನೆಲ್ಲ ಎದುರಿಸುವ ಶಕ್ತಿ ನನಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು; ಯಾವುದೇ ತನಿಖೆ ನಡೆಸಲಿ, ಅದಕ್ಕೆ ನಾನು ತಯಾರಿದ್ದೇನೆ ಎಂದು ಸವಾಲು ಹಾಕಿದರು.

ಅಲ್ಲದೆ; ಮಿನರ್ವ ಮಿಲ್ಲಿನ 24 ಎಕರೆ ಕರಾಬ್‌ ಭೂಮಿಯನ್ನು ನುಂಗಿ ನೀರು ಕುಡಿದಿರುವ ಲುಲು ಮಾಲ್‌ ಬಗ್ಗೆಯೂ ಈ ಸರಕಾರ ತನಿಖೆ ನಡೆಸಲಿ ಎಂದು ಅವರು ಸವಾಲು ಹಾಕಿದರಲ್ಲದೆ; ಶೀಘ್ರವೇ ಈ ಲುಲು ಮಾಲಿನ ಅಕ್ರಮವನ್ನು ದಾಖಲೆ ಸಮೇತ ಬಯಲು ಮಾಡುತ್ತೇನೆ ಎಂದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಜಂತಕಲ್‌ ಮೈನಿಂಗ್‌ ಇರಬಹುದು ಅಥವಾ ಬಿಡದಿಯ ನನ್ನ ಜಮೀನು ಇರಬಹುದು, ಯಾವುದರ ಬಗ್ಗೆಯೇ ಆಗಲಿ, ತನಿಖೆ ಮಾಡಿಸಲಿ. ಆದಷ್ಟು ಬೇಗ ಇದನ್ನು ಮಾಡಿಸಲಿ ಎಂದು ನಾನೂ ಕಾಯುತ್ತಿದ್ದೇನೆ ಎಂದು ಹೇಳಿದರು.ಹೆದರಿಸಿದರೆ ಕುಮಾರಸ್ವಾಮಿ ಹೆದರಿಕೊಳ್ಳುತ್ತಾನೆ, ಹೆದರಿಸಿ ಅವರ ಬಾಯಿ ಮುಚ್ಚಿಸಬಹುದು ಎಂದು ಯಾರಾದರೂ ನಂಬಿದ್ದರೆ ಅವರ ಮೂರ್ಖತನವಷ್ಟೇ ಎಂದು ಅವರು ಸರಕಾರಕ್ಕೆ ತಿರುಗೇಟು ಕೊಟ್ಟರು.

ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆ ಜಾಗ ತನಿಖೆ ಮಾಡಿಸುವ ಹಾಗಿದ್ದರೆ ತನಿಖೆ ಮಾಡಿಸಿ ಎಂದು ಸಚಿವ ಚೆಲುವರಾಯಸ್ವಾಮಿಗೆ ಸವಾಲ್ ಹಾಕಿದ ಮಾಜಿ ಮುಖ್ಯಮಂತ್ರಿಗಳು, ಬಿಡದಿ ತೋಟದ ಮನೆ ಜಮೀನು ಒತ್ತುವರಿ ಆಗಿದೆ. ‌ಈ ಬಗ್ಗೆ ತನಿಖೆ ಮಾಡಿಸಬೇಕು ಎಂಬ ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ನಾನು ಅವರಲ್ಲಿ ಮನವಿ ಮಾಡುತ್ತೇನೆ, ಆದಷ್ಟು ಬೇಗ ತನಿಖೆ ಮಾಡಿಸಲಿ. ನನ್ನ ಒಟ್ಟಾರೆ ಭೂಮಿಯಲ್ಲಿ ಮೂರ್ನಾಲ್ಕು ಎಕರೆ ಕಡಿಮೆ ಬರುತ್ತಿದೆ. ಅವರು ಹುಡುಕಿಸಿ ಕೊಡಲಿ ಎಂದು ಅವರು ಟಾಂಗ್‌ ಕೊಟ್ಟರು.

ಗುರುವಾರ ಸಂಪುಟ ಸಭೆ ಆದ ಮೇಲೆ ಯಾರು ಯಾರು ಇನ್ನೊಂದು ಸಭೆ ಮಾಡಿದರು ಎಂದು ನನಗೆ ಗೊತ್ತಿದೆ. ಅದನ್ನು ನನಗಾಗಿ, ನನ್ನನ್ನು ಕಟ್ಟಿ ಹಾಕಲು ಮಾಡಿದ ಸಂಪುಟ ಸಭೆ. ಆ ಇನ್ನರ್ ಮೀಟಿಂಗ್ ನಲ್ಲಿ ಏನು ಆಯಿತು ಎನ್ನುವುದು ನನಗೆ ಗೊತ್ತಿದೆ. ಬಿಡದಿದು ಭೂಮಿಯ ಬಗ್ಗೆ ತನಿಖೆ ಆಗಬೇಕು ಎಂದು ಅಲ್ಲಿ ಸಚಿವರೊಬ್ಬರು ಹೇಳಿದ್ದಾರೆ. 38 ವರ್ಷ ಆಯ್ತು ಅ ಜಾಗವನ್ನು ನಾನು ಖರೀದಿ ಮಾಡಿ. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಈ ಬಗ್ಗೆ ಎಷ್ಟು ತನಿಖೆ ಆಗಿದೆ ಎನ್ನುವುದರ ಬಗ್ಗೆ ಗ್ರಂಥವನ್ನೇ ಬರೆಯಬಹುದು ಎಂದರು ಅವರು.

 

ಲೋಕಾಯುಕ್ತ, ಸಿಐಡಿ ಸೇರಿ ಬಿಜೆಪಿ ಸರಕಾರ ಇದ್ದಾಗಲೂ ತನಿಖೆ ಮಾಡಲಾಯಿತು. ಆಗೆಲ್ಲಾ ಏನೂ ಆಗಲಿಲ್ಲ. ಸಿದ್ದಪ್ಪ ಅನ್ನುವ ಅಧಿಕಾರಿಯಿಂದ ನನ್ನ ವಿರುದ್ದ ರಿಪೋರ್ಟ್ ಬರೆಸಿದರು. ಅದರ‌ ಮೇಲೆ ಹಿರೇಮಠ ಅವರು ಹೈಕೋರ್ಟ್ ಗೆ ಹೋದರು. ಹೈಕೋರ್ಟ್ ತೀರ್ಪು ಕೂಡ ಬಂದಿದೆ. ಈಗ ಚೆಲುವರಾಯಸ್ವಾಮಿ ‌ತನಿಖೆ ಮಾತು ಹೇಳಿದ್ದಾರೆ. ನಾನು ಕೈ ಮುಗಿದು ಕೇಳುತ್ತೇನೆ, ತನಿಖೆ ಮಾಡಿಸಲಿ ಎಂದು ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

ಕರಾಬ್‌ ಜಮೀನು ಲುಲು ಮಾಲ್‌ ಪಾಲು:

ನನ್ನ ಭೂಮಿಯ ಬಗ್ಗೆ ಇಷ್ಟೆಲ್ಲ ಮಾತನಾಡುವ ಇವರು ೨೪ ಎಕರೆ ಕರಾಬ್‌ ಜಮೀನು ನುಂಗಿ ಹಾಕಿರುವ ಲುಲು ಮಾಲ್‌ ಬಗ್ಗೆ ಮೌನ ವಹಿಸುತ್ತಾರೆ, ಏಕೆ? ಅವರಿಗೊಂದು, ನನಗೊಂದು ಕಾನೂನು ಇದೆಯೇ? ಎನ್ನುವ ಮೂಲಕ ಲುಲು ಮಾಲ್‌ ಕುರಿತ ಹೊಸ ಬಾಂಬ್‌ ಸಿಡಿಸಿದರು ಮಾಜಿ ಮುಖ್ಯಮಂತ್ರಿಗಳು.

ಲುಲು ಮಾಲ್ ಇರುವ  24 ಎಕರೆ ಜಾಗ ಕರಾಬ್ ಭೂಮಿ. 1934ರಲ್ಲಿ ಮಿನರ್ವ ಮಿಲ್ ಗೆ ಆ ಜಾಗವನ್ನು ನೀಡಲಾಗಿತ್ತು. ಆ ದಾಖಲೆ ಹೇಗೆ ಸುಟ್ಟು ಹಾಕಿದರು ಎನ್ನುವುದು ನನಗೆ ಗೊತ್ತಿದೆ. ಲುಲು ಮಾಲ್ ಕರಾಬ್ ಲ್ಯಾಂಡ್. ಅದು ಸತ್ಯ. ಅದನ್ನು ಅಕ್ರಮವಾಗಿ ಖರೀದಿ ಮಾಡಿ ಮಾಲ್ ಕಟ್ಟಿದ್ದಾರೆ. ಇದೆಲ್ಲವನ್ನೂ ಮುಂದೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಅವರು ತಿಳಿಸಿದರು

ಜಂತಕಲ್‌ ಮೈನಿಂಗ್‌ ತನಿಖೆ ಬೇಗ ಮಾಡಿಸಿ:

ಜಂತಕಲ್ ಮೈನಿಂಗ್ ಪ್ರಕರಣದ ಮರು ತನಿಖೆ ಮಾಡೋದಾದರೆ ಮಾಡಲಿ. ಆದಷ್ಟು ಬೇಗ ತನಿಖೆ ಮಾಡಿ. ಇದು 13 ವರ್ಷದ ಹಿಂದಿನ ಪ್ರಕರಣ. ಕಾಂಗ್ರೆಸ್ ‌ನಾಯಕರು ತಮ್ಮ ವಿರುದ್ಧದ ಆರೋಪಗಳನ್ನು ಮುಚ್ಚಿಕೊಳ್ಳಲು ಈಗ ನನ್ನ ವಿಷಯ ಕೆದಕುತ್ತಿದ್ದಾರೆ. ಕೆದಕಲಿ, ನಾನೇನು ಹೆದರಿ ಓಡಿ ಹೋಗುವುದಿಲ್ಲ ಎಂದರು ಕುಮಾರಸ್ವಾಮಿ ಅವರು.

ಕಾಂಗ್ರೆಸ್‌ ಸರಕಾರ ಇದ್ದಾಗ ಎಸಿಬಿ ರಚನೆ ಮಾಡಿದ್ದರು. ಎಷ್ಟು ಪ್ರಕರಣ ತನಿಖೆ ಮಾಡಿ ಮುಗಿಸಿದ್ದಾರೆ ಇವರು?ಆ ಪೈಕಿ ರಿಡೂ ಪ್ರಕರಣ ಎಲ್ಲಿಗೆ ಬಂತು? ಕೆಂಪಣ್ಣ ವರದಿ ಏನಾಯಿತು? ಎಂದು ಸರಕಾರಕ್ಕೆ ಟಾಂಗ್‌ ಕೊಟ್ಟ ಅವರು; ನನಗೆ 14 ತಿಂಗಳು ಕಾಂಗ್ರೆಸ್‌ ಬೆಂಬಲ ನೀಡಿತ್ತು. ಆಗ ನನ್ನ ಕೇಸ್ ಅನ್ನು ನಾನು ಮುಚ್ಚಿ ಹಾಕಿದೆನೇ? ಕೆಲ ಸತ್ಯಗಳನ್ನು ಇಲ್ಲಿ ಹೇಳುವುದಕ್ಕೆ ಆಗೊದಿಲ್ಲ. ಈ ವ್ಯವಸ್ಥೆ ಹೇಗಿದೆ ಅಂತ ಹೇಳಲು ಬೇಸರ ಆಗುತ್ತದೆ. ಗಾಂಧಿಜೀ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಇವತ್ತೇನಾದರೂ ಇದ್ದಿದ್ದರೆ ಅವರಿಗೂ ಮಸಿ ಬಳಿಯುತ್ತಿದ್ದರು. ಪ್ರಾಮಾಣಿಕವಾಗಿ ಇರಲು ಈ ಸಮಾಜ ಬಿಡುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಹುಬ್ಲೋಟ್ ವಾಚ್ ಪ್ರಕರಣ ಪ್ರಸ್ತಾಪ ಮಾಡಿದಾಘ ನನ್ನನ್ನು ಬಂಧನ ಮಾಡುವುದಕ್ಕೆ ಹಿಂದಿನ ಇದೇ ಕಾಂಗ್ರೆಸ್‌ ಸರಕಾರ ಹುನ್ನಾರ ನಡೆಸಿತ್ತು. ಪೊಲೀಸ್‌ ಅಧಿಕಾರಿಗಳಾದ ಚರಣ್ ರೆಡ್ಡಿ, ಕೆಂಪಯ್ಯ ನನಗೆ ನೊಟೀಸ್ ನೀಡಿದ್ದರು. ಕುಮಾರಸ್ವಾಮಿಯನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಗುರುವಾರ ಸಭೆಯಂತೆ ಸಭೆ ಮಾಡಿ ಚರ್ಚೆ ಮಾಡಿದ್ದರು. ನಾನು ನಿರೀಕ್ಷಿಣಾ ಜಾಮೀನು ಪಡೆಯಲ್ಲ ಎಂದು ವಕೀಲರಿಗೆ ಹೇಳಿದ್ದೆ. ನನ್ನ ವಕೀಲರು,  “ಹುಡುಗಾಟ ಆಡಬೇಡಿ” ಎಂದು ಹೇಳಿದ್ದರು. ಬಂಧನ ಮಾಡಿದರೆ ಕುಮಾರಸ್ವಾಮಿಯನ್ನು ಬಂಧಿಸಿದರು ಎಂದಾಗುತ್ತದೆ, ಏನಕ್ಕೂ ಬಂಧಿಸಿದರು, ಅದರ ಒಳ ಹುನ್ನಾರ ಏನು ಎಂಬುದು ಯಾರೂ ಹೇಳುವುದಿಲ್ಲ. ವರ್ಚಸ್ಸಿಗೆ ಧಕ್ಕೆ ತರುತ್ತಾರೆ. ಹೀಗಾಗಿ ನಿರೀಕ್ಷಣಾ ಜಾಮೀನು ಪಡೆದೆ ಎಂದರು ಅವರು.

ಈಗಲೂ ನಾನು ಸವಾಲು ಹಾಕುತ್ತೇನೆ, ನನ್ನನ್ನು ಬಂಧನ ಮಾಡಲಿ ನೋಡೋಣ. ಏನೇನು ಇದೆ ಈ ಕೇಸಿನಲ್ಲಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಜಂತಕಲ್ ಕೇಸನ್ನು ಆದಷ್ಟು ಬೇಗ ತನಿಖೆ ಮಾಡಿ ಸತ್ಯವನ್ನು ಜನರಿಗೆ ತಿಳಿಸಲಿ ಎಂದು ಅವರು ಹೇಳಿದರು.

 

ಈ ಸಂದರ್ಭದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top