ಬೆಂಗಳೂರು, ಜ.2: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಆಟಗಾರರಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಸನ್ಮಾನಿಸಿದರು. ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿ ನಡೆದ ಜ್ಯೂನಿಯರ್ ವಾಲಿಬಾಲ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಕರ್ನಾಟಕದ ಪುರುಷರ ತಂಡ ದ್ವಿತೀಯ ಸ್ಥಾನ ಪಡೆದಿದೆ. ತಮಿಳುನಾಡಿನ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 3-1 ರಲ್ಲಿ ಪರಾಭವಗೊಳ್ಳುವ ಮೂಲಕ ಕರ್ನಾಟಕ ತಂಡ ಸಿಲ್ವರ್ ಪದಕ ಪಡೆದಿದೆ. ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಮಹಿಳೆಯರ ತಂಡ 8 ನೇ ಸ್ಥಾನ ಪಡೆದಿದೆ.

ಬುರ್ದ್ವಾನ್ ನಲ್ಲಿ ನಡೆದ ವಾಲಿಬಾಲ್ ನ್ಯಾಷನಲ್ ಚಾಂಪಿಯನ್‌ಶಿಪ್ ನಲ್ಲಿ ಪಾಲ್ಗೊಂಡು ಕರ್ನಾಟಕದ ಆಟಗಾರರು ಉತ್ತಮ ಸಾಧನೆ ಮಾಡಿದ್ದಾರೆ. ಪುರುಷರ ತಂಡ ಫೈನಲ್ ಪಂದ್ಯದಲ್ಲಿ ಸ್ವಲ್ಪ ಹಿನ್ನಡೆಯಿಂದ ಚಿನ್ನದ ಪದಕ ತಪ್ಪಿದೆ. ಆದರೆ, ಮುಂದಿನ ಟೂರ್ನಿಯಲ್ಲಿ ನಮ್ಮ ಕರ್ನಾಟಕ ತಂಡ ಚಿನ್ನದ ಪದಕ ಗೆಲ್ಲುವ ವಿಶ್ವಾಸವಿದೆ. ನಮ್ಮ ವಾಲಿಬಾಲ್ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು. ಹಾಗೂ ಕರ್ನಾಟಕ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ, ಮಾಜಿ ಉಪಮಹಾಪೌರರು ಎಸ್. ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.