Kothalavadi Trailer; ರಾಕಿಬಾಯ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ಮೊದಲ ಚಿತ್ರ !
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ‘ಕೊತ್ತಲವಾಡಿ’. ಆಗಸ್ಟ್ ಮೊದಲ ವಾರಲ್ಲಿ ಸಿನಿಮಾ ತೆರೆಗೆ ಬರಲಿದೆ. ಸದ್ಯ ಚಿತ್ರದ ಜಬದಸ್ತ್ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಾಲ್ಲಿದೆ.

ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವ ‘ಕೊತ್ತಲವಾಡಿ’ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಗೋಪಾಲ ದೇಶಪಾಂಡೆ ಹಾಗೂ ರಾಜೇಶ್ ನಟರಂಗ ಮತ್ತೆರಡು ಪವರ್‌ಫುಲ್ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ನಾಲ್ಕು ಪಾತ್ರಗಳ ಸುತ್ತಾ ಬಹುತೇಕ ಕಥೆ ಸಾಗುತ್ತದೆ ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತಿದೆ. ಶ್ರೀರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೊದಲ ನೋಟದಲ್ಲೇ ಟ್ರೈಲರ್ ವಾಹ್ ಎನಿಸುವಂತಿದೆ. ಸಿನಿಮಾ ನೋಡಬೇಕು ಎನ್ನುವ ಕುತೂಹಲ ಮೂಡಿಸುತ್ತಿದೆ.

ಟೈಟಲ್ ಹೇಳುವಂತೆ ಇದು ‘ಕೊತ್ತಲವಾಡಿ’ ಎಂಬ ಊರಿನ ಕಥೆ. ಆ ಊರಿನಲ್ಲಿ ನಡೆಯುವ ಘಟನೆಗಳೇ ಚಿತ್ರದ ಹೂರಣ. ಕಥೆಗೆ ಕಮರ್ಷಿಯಲ್ ಟಚ್ ಕೊಟ್ಟು ಹೇಳುವ ಪ್ರಯತ್ನ ಮಾಡಿದ್ದಾರೆ. ಮೋಹನ ಎಂಬ ಹಳ್ಳಿ ಹೈದನಾಗಿ ಲವ್ ಬಾಯ್ ಆಗಿ ಪೃಥ್ವಿ ಅಂಬರ್ ಕಾಣಿಸಿಕೊಂಡಿದ್ದಾರೆ. ಮಾಸ್ ಅವತಾರದಲ್ಲಿ ಕೂಡ ಅಬ್ಬರಿಸಿದ್ದಾರೆ. ಇನ್ನು ಶಾಲಾ ಹುಡುಗಿಯಾಗಿ ನಾಯಕನನ್ನು ಪ್ರೀತಿ ಬೀಳುವ, ಆತನ ಜೊತೆ ಊರನ್ನೇ ಬಿಟ್ಟು ಹೋಗಲು ಮುಂದಾಗುತ್ತಾಳೆ. ಡೈಲಾಗ್ಸ್ ಸಖತ್ ಮಜವಾಗಿದೆ. ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಪೃಥ್ವಿ ಅಂಬರ್ ನಡುವಿನ ಪೈಪೋಟಿ ಚಿತ್ರದ ಅಸಲಿ ಕಥೆ. ನಡುವೆ ಪೊಲೀಸ್ ಅಧಿಕಾರಿಗೆ ರಾಜೇಶ್ ನಟರಂಗ ಗಮನ ಸೆಳೆದಿದ್ದಾರೆ.

ಹಸಿವು, ಬಂಡಾಯ, ಬೆಂಕಿ, ರಕ್ತಸಿಕ್ತ ಕಥೆ ‘ಕೊತ್ತಲವಾಡಿ’ ಚಿತ್ರದಲ್ಲಿದೆ. ಅದರಲ್ಲಿ ರಾಜಕೀಯ ಕೂಡ ನುಳುಸಿ ಊರಿನಲ್ಲಿ ಅಲ್ಲೋಲ ಸೃಷ್ಟಿಸಿಯಾಗುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ತೆರೆಮೇಲೆ ನೋಡಬೇಕು. ಟ್ರೈಲರ್‌ನಲ್ಲೇ ನಿಡುವಳ್ಳಿ ಸಂಭಾಷಣೆ ಹೈಲೆಟ್ ಆಗಿದೆ.
“ಬಡತನ ಅಡ್ಡ ಅಂತ ಅಡ್ಡದಾರಿ ಹಿಡಿಯುವುದು ತಪ್ಪು ಮೋಹನ” ಎಂಬ ಒಂದೊಳ್ಳೆ ಡೈಲಾಗ್ ಹಿನ್ನೆಲೆಯಲ್ಲಿ ಟ್ರೈಲರ್ ಶುರುವಾಗುತ್ತದೆ. “ಚರ್ಬಿ ಇಲ್ದೆ ಹೋದ್ರೆ ಬಾಡು ರುಚಿ ಇರಲ್ಲ ಸರ್” ಎನ್ನುವ ಡೈಲಾಗ್ ಕೂಡ ಇಷ್ಟವಾಗುತ್ತದೆ. ನಾವು ಬದುಕೋಕೆ ಹರಿಯೋ ನೀರನ್ನು ತಡಿತ್ತೀವಿ, ಉಸಿರಾಡೋ ಗಾಳಿನೂ ತಡೀತ್ತೀವಿ” ಅದೇ ರೀತಿ “ಹುತ್ತ ಹೊಡೆದರೆ ಪ್ರಯೋಜನ ಇಲ್ಲ ಅಂತ ಗೊತ್ತಾಗಿದೆ ಅದಕ್ಕೆ ಈ ಸಲ ಹೆಡೆ ಮೇಲೆ ಹೊಡೀತ್ತೀನಿ” ಎನ್ನುವ ಡೈಲಾಗ್ಸ್ ಮಾಸ್ ಚಿತ್ರಕ್ಕೆ ಬೇಕಾದ ಗತ್ತು ತಂದು ಕೊಟ್ಟಿದೆ.
ಟ್ರೈಲರ್ ಕಟ್, ವಿಕಾಸ್ ವಸಿಷ್ಠ ಬಿಜಿಎಂ ಚೆನ್ನಾಗಿದೆ. ಅದೆಲ್ಲಕ್ಕಿಂತ ಕಾರ್ತಿಕ್ ಎಸ್ ಛಾಯಾಗ್ರಹಣ ವಿಷ್ಯುವಲಿ ಚಿತ್ರವನ್ನು ಗೆಲ್ಲಿಸುವ ಸುಳಿವು ಸಿಗುತ್ತಿದೆ. ಬಾಬಣ್ಣ ಆಗಿ ಗೋಪಾಲ್ ಕೃಷ್ಣ ದೇಶಪಾಂಡೆ ಚಿತ್ರ ಪಾತ್ರವೇ ಹೈಲೆಟ್ ಎನ್ನುವಂತೆ ಟ್ರೈಲರ್ನಲ್ಲಿ ಗೊತ್ತಾಗುತ್ತಿದೆ. ನಾಯಕನ ಪಾತ್ರವನ್ನು ಕೂಡ ಈ ಪಾತ್ರ ಮೀರಿಸುವ ಸಾಧ್ಯತೆಯಿದೆ. ಅದಕ್ಕೆ ತಕ್ಕಂತೆ ಅವರ ನಟನೆ ಹುಬ್ಬೇರಿಸುವಂತಿದೆ.
ಆರಂಭದಲ್ಲಿ ಆತ್ಮೀಯರಾಗಿದ್ದ ಮೋಹನ ಹಾಗೂ ಬಾಬಣ್ಣ ಬಳಿಕ ಎದುರಾಳಿಗಳಾಗುವುದು ಯಾಕೆ? ಇಬ್ಬರ ನಡುವಿನ ವೈಷಮ್ಯಕ್ಕೆ ಕಾರಣ ಏನು? ಎನ್ನುವುದು ಚಿತ್ರದ ಇಂಟ್ರೆಸ್ಟಿಂಗ್ ಪಾಯಿಂಟ್ ಎನ್ನುವಂತಿದೆ. ಒಟ್ಟಾರೆ ಟ್ರೈಲರ್ ಟೆಸ್ಟ್‌ನಲ್ಲಿ ‘ಕೊತ್ತಲವಾಡಿ’ ಸಿನಿಮಾ ಗೆದ್ದಿದೆ. ಆಗಸ್ಟ್ 1ರಂದು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಯಶ್ ತಾಯಿ ನಿರ್ಮಾಣದ ಮೊದಲ ಸಿನಿಮಾ ಆಗಿರುವುದರಿಂದ ನಿರೀಕ್ಷೆ ಕೊಂಚ ಹೆಚ್ಚಿದೆ. ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ.