ಅಂಗಾಂಗ ದಾನಕ್ಕಾಗಿ ಕಾಯುತ್ತಲೇ ಕೊನೆಯುಸಿರೆಳೆಯುತ್ತಿದ್ದಾರೆ 4 ಲಕ್ಷ ರೋಗಿಗಳು

Kannada Nadu
ಅಂಗಾಂಗ ದಾನಕ್ಕಾಗಿ ಕಾಯುತ್ತಲೇ ಕೊನೆಯುಸಿರೆಳೆಯುತ್ತಿದ್ದಾರೆ 4 ಲಕ್ಷ ರೋಗಿಗಳು

ನಂಜುಂಡಪ್ಪ.ವಿ
ಬೆಂಗಳೂರು: ಅಂಗಾಂಗ ದಾನದ ಬಗ್ಗೆ ಜನ ಸಾಮಾನ್ಯರಲ್ಲಿ ಎಷ್ಟೇ ಅರಿವು ಮೂಡಿಸಿದರೂ ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ. ಇಡೀ ದೇಶದಲ್ಲಿ ಅಂಗಾಂಗ ದಾನದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದರೂ ಅಂಗಾಂಗ ದಾನಕ್ಕೆ ಮುಂದಾಗುತ್ತಿಲ್ಲ. ಕಳೆದ ವರ್ಷ ಕೇವಲ 170 ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದು, ಬೇಡಿಕೆ – ಪೂರೈಕೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ದೇಶದಲ್ಲಿ ಅಂಗಾಂಗ ಪಡೆಯಲು ಕಾಯುತ್ತಿರುವ 4 ಲಕ್ಷ ಮಂದಿ ನಿರಾಶೆಯಿಂದ ನಿರೀಕ್ಷೆಯ ಸಮಯದಲ್ಲೇ ಸಾವನ್ನಪ್ಪುತ್ತಿದ್ದಾರೆ.

ಕಳೆದ 20 ವರ್ಷಗಳಿಂದ ಬಹು ಅಂಗಾಂಗ ಕಸಿ ವಲಯದಲ್ಲಿ ಅವಿರತವಾಗಿ ದುಡಿಯತ್ತಿರುವ, ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಬಹು ಅಂಗಾಂಗ ಕಸಿ ತಜ್ಞರಾದ ಡಾ. ಸುರೇಶ್ ರಾಘವಯ್ಯ ಈ ಕುರಿತು ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಂಗಾಂಗ ಕಸಿಗಾಗಿ ರಾಜ್ಯದಲ್ಲಿ ಸಹಸ್ರಾರು ಮಂದಿ ಕಾಯುತ್ತಿದ್ದಾರೆ. ತಾಜಾ ಮಾಹಿತಿಯಂತೆ ಮೂತ್ರಪಿಂಡಕ್ಕಾಗಿ 4,800, ಯಕೃತ್ ಗಾಗಿ 1,200 ಜನ ಸರತಿಯಲ್ಲಿದ್ದಾರೆ. ಆದರೆ ಕಳೆದ ವರ್ಷ ಕೇವಲ 170 ಮಂದಿ ಅಂಗಾಂಗ ದಾನ ಮಾಡಿದ್ದು, ಬೇಡಿಕೆ – ಪೂರೈಕೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಮೂತ್ರಪಿಂಡ ಪಡೆಯಲು 4 ರಿಂದ 5 ವರ್ಷ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಕೃತ್ ಗಾಗಿ 9 ತಿಂಗಳಿಂದ ಒಂದು ವರ್ಷ ಕಾಯಬೇಕಾಗಿದೆ.

ಯಕೃತ್ ಗಾಗಿ ಕಾಯುವ ರೋಗಿಗಳ ಪೈಕಿ ಶೇ 20 ರಷ್ಟು ಮಂದಿ ಅಂಗಾಂಗ ದೊರೆಯುವ ಮುನ್ನವೇ ಮರಣವನ್ನಪ್ಪುತ್ತಿದ್ದಾರೆ. ಮೂತ್ರಪಿಂಡ ರೋಗಿಗಳು ಡಯಾಲಿಸಸ್ ಮತ್ತಿತರೆ ಕಾರಣದಿಂದ ಶೇ 20 ರಿಂದ 30 ರಷ್ಟು ಮಂದಿ ಮರಣ ಹೊಂದುತ್ತಿದ್ದಾರೆ. ದೇಶದಲ್ಲಿ ಅಂಗಾಂಗಗಳು ದೊರೆಯದೇ 4 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಇದೇ ಕಾರಣದಿಂದ ಅಂಗಾಂಗ ದಾನದ ಬಗ್ಗೆ ಮತ್ತಷ್ಟು ಜನ ಜಾಗೃತಿ ಮೂಡಬೇಕಿದೆ ಎನ್ನುತ್ತಾರೆ.

ಅಂಗಾಂಗ ದಾನಕ್ಕೆ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಆರೋಗ್ಯ ಇಲಾಖೆಯ ಜೀವ ಸಾರ್ಥಕತೆ ಜಾಲತಾಣ – https://www.jeevasarthakathe.karnataka.gov.in ನಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಹೆಸರು, ವಯಸ್ಸು, ವಿಳಾಸ ಮೊದಲಾದ ವಿವರಗಳನ್ನು ಭರ್ತಿ ಮಾಡಬೇಕು. ರಕ್ತದ ಗುಂಪು, ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ಹಾಕಬೇಕು. ಆಧಾರ್ ಸಂಖ್ಯೆ ಕಡ್ಡಾಯ. ಯಾವ ಯಾವ ಅಂಗಗಳನ್ನು ದಾನ ಮಾಡುವ ಇಚ್ಛೆ ಇದೆ ಎಂಬುದನ್ನು ಗುರುತಿಸಿ ಅಂಗಾಂಗ ದಾನದ ಅರ್ಜಿಯನ್ನು ಸಲ್ಲಿಸಬೇಕು. ತಕ್ಷಣ ಜೀವಸಾರ್ಥಕತೆ ಡೋನರ್ ಕಾರ್ಡ್ (ದಾನಿ ಕಾರ್ಡ್) ಸಿಗಲಿದೆ. ಈ ಅಂಗಾಂಗ ದಾನ ನೋಂದಣಿಗೆ ಇಬ್ಬರು ಸಾಕ್ಷಿಗಳ ಸಹಿ ಕೂಡ ಅಗತ್ಯ.

-ಡಾ. ಸುರೇಶ್ ರಾಘವಯ್ಯ, ಬಹು ಅಂಗಾಂಗ ಕಸಿ ತಜ್ಞರು, ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆ

 

ಅಂಗಾಂಗ ಪಡೆಯಲು ಸೂಕ್ತ ವಿಧಾನಗಳನ್ನು ಅನುಸರಿಸಲಾಗುತ್ತಿದ್ದು, ಅವೈಜ್ಞಾನಿಕ ವಿಧಾನಗಳಿಗೆ ಇಲ್ಲಿ ಅವಕಾಶವೇ ಇಲ್ಲ. ಅಂಗಾಂಗಳನ್ನು ಮಾರಾಟ ಮಾಡಲು ಇಲ್ಲವೆ ಬಲವಂತವಾಗಿ ಕಸಿಯಲು ಸಾಧ್ಯವಿಲ್ಲ. ಜೊತೆಗೆ ಮೆದುಳು ನಿಷ್ಕ್ರೀಯ ವಿಚಾರದಲ್ಲೂ ಮೋಸ ಆಗುವುದಿಲ್ಲ. ಎರಡು ಸ್ವಾಯತ್ತ ವೈದ್ಯಕೀಯ ತಂಡಗಳ ಪರಿಶೀಲನೆ ನಂತರ ಬ್ರೈನ್ ಡೆಡ್ ಘೋಷಿಸಲಾಗುತ್ತದೆ. ಅಂಗಾಂಗ ಕಸಿಯಲಾಗುತ್ತಿದೆ. ಮಾರಾಟ ಮಾಡಲಾಗುತ್ತಿದೆ ಎಂಬುದೆಲ್ಲವೂ ತಪ್ಪು ಕಲ್ಪನೆಗಳು. ಒಂದು ದಿನದ ಮಗುವಿನಿಂದ 100 ವರ್ಷದವರೆಗಿನ ವಯೋವೃದ್ಧರವರೆಗೆ ಯಾರಿಂದ ಬೇಕಾದರೂ ಅಂಗಾಂಗಳನ್ನು ಪಡೆದು ಕಸಿ ಮಾಡಬಹುದಾಗಿದೆ. ಮದುಮೇಹ ಮತ್ತು ಅಧಿಕ ರಕ್ತದೊತ್ತಡ ಇದ್ದವರ ಅಂಗಾಂಗಳನ್ನೂ ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ “ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ” ಝಿರೋ ಟ್ರಾಫಿಕ್ ನಲ್ಲಿ “ಚಲಿಸಿದ ಹೃದಯ”, ಎಂಬಿತ್ಯಾದಿ ಸುದ್ದಿಗಳನ್ನು ನೋಡುತ್ತೇವೆ. ಅಂಗಾಂಗ ಸಾಗಾಟಕ್ಕೆ ಸಂಚಾರಿ ಪೊಲೀಸರಿಂದ ವ್ಯಾಪಕ ಸ್ಪಂದೆ ವ್ಯಕ್ತವಾಗಿದೆ. ವಿಮಾನ ನಿಲ್ದಾಣಗಳು ಸಹ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿವೆ. 1994 ರಲ್ಲಿ ಭಾರತ ಸರ್ಕಾರ ಮಾನವ ಅಂಗ ಕಸಿ ಕಾಯ್ದೆ ಜಾರಿಗೆ ಬಂತು. ಮೆದುಳು ನಿಷ್ಕ್ರಿಯ ವ್ಯಕ್ತಿಯಗೊಂಡವರಿಂದ ಅಂಗಾಂಗ ದಾನಕ್ಕೆ ಈ ಕಾಯ್ದೆ ಅನುವು ಮಾಡಿಕೊಟ್ಟಿತು.

ಅಂಗಾಂಗ ದಾನಿಯ ರಕ್ಷಣೆ ಅತ್ಯಂತ ಮುಖ್ಯವಾಗಿದೆ. ಆದರೆ ಅಂಗಾಂಗ ದಾನ ಮಾಡುವ ಶೇ 99 ರಷ್ಟು ಜನರಿಗೆ ಯಾವುದೇ ಪ್ರತಿಕೂಲ ಪರಿಸ್ಥಿತಿ ಇರುವುದಿಲ್ಲ. ಯಕೃತ್ ನಲ್ಲಿ ಶೇ 92 ರಿಂದ 94 ರಷ್ಟು ಮಂದಿ ಮೂತ್ರಪಿಂಡದಲ್ಲಿ ಶೇ 97 ರಿಂದ 98 ಮಂದಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಅಂಗಾಂಗ ಕಸಿ ಅತ್ಯಂತ ಸುರಕ್ಷಿತವಾದದ್ದು. ಯಾವುದೇ ತೊಂದರೆ ಇಲ್ಲ. ಅಂಗಾಂಗ ಕಸಿ ಮಾಡುವುದು ಒಬ್ಬಿರಲ್ಲ. 20 ತಜ್ಞ ವೈದ್ಯರ ತಂಡ ಇಂತಹ ಸೂಕ್ಷ್ಮ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸುತ್ತಾರೆ.

ರಾಜ್ಯದಲ್ಲಿ 2017 ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ಥಾಪಿಸಿದ “ಜೀವ ಸಾರ್ಥಕತೆ” ಸಂಸ್ಥೆಯು ದಾನಿಗಳಿಂದ ಅಂಗಾಂಗಗಳನ್ನು ಸಂಗ್ರಹಿಸಿ, ಅಗತ್ಯವಿರುವವರಿಗೆ ತಲುಪಿಸುವ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯನ್ನು “ಸೊಟ್ಟೊ ಕರ್ನಾಟಕ’ (State Organ and Tissue Transplant Organization-SOTTO) ಎಂದು ಹೆಸರಿಸಲಾಗಿದೆ.

ದೇಶದಲ್ಲಿ ಈ ವರ್ಷದ ಜನವರಿ 31ರವರೆಗೆ 43,276 ಜನರು ಆನ್ಲೈನ್ ಮೂಲಕ ತಮ್ಮ ಜೀವಿತಾವಧಿಯ ನಂತರ ಅಂಗಾಂಗ ದಾನದ ಪ್ರತಿಜ್ಞೆ ಮಾಡಿದ್ದಾರೆ. ಇದರಿಂದ ಅಪಾಯವೇನೂ ಇಲ್ಲ. ಅಂಗ ದಾನದ ಬಳಿಕ ಮೃತ ದೇಹ ವಿರೂಪಗೊಳ್ಳುತ್ತದೆ ಎಂಬುದು ಮಿಥ್ಯೆಯಾಗಿದೆ. ವೈದ್ಯಕೀಯ ನಿಯಮಾನುಸಾರ ಮೃತದೇಹವನ್ನು ಸೂಕ್ತ ರೀತಿಯಲ್ಲಿ ಹಸ್ತಾಂತರಿಸಲಾಗುತ್ತದೆ.

ಅಂಗಾಂಗ ದಾನಕ್ಕೆ ನಿರ್ಧರಿಸಿದ ವ್ಯಕ್ತಿಯು ಯಾವುದೇ ಸಮಯದಲ್ಲಾದರೂ ತನ್ನ ನಿರ್ಧಾರ ಬದಲಿಸಲು ಅವಕಾಶವಿದೆ. ಒಮ್ಮೆ ಸಹಿ ಹಾಕಿ, ಸಮ್ಮತಿ ಹಿಂಪಡೆಯುವಂತಿಲ್ಲ ಎಂಬುದು ಕೇವಲ ಊಹಾಪೋಹವಷ್ಟೇ. 18 ವರ್ಷ ಮೇಲ್ಪಟ್ಟವರು ಅಂಗಾಂಗ ದಾನಕ್ಕೆ ನೋಂದಾಯಿಸಿ ಜೀವ ಉಳಿಸುವ ಪ್ರತಿಜ್ಞೆ ಮಾಡಲು ಅವಕಾಶವಿದೆ.

ಬೇರೊಬ್ಬ ವ್ಯಕ್ತಿಯನ್ನು ಉಳಿಸಲು ಕೆಲವು ಅಂಗಗಳನ್ನು ಮಾತ್ರ ಮೃತ ವ್ಯಕ್ತಿ ಅಥವಾ ಜೀವಂತ ವ್ಯಕ್ತಿಯಿಂದ ಪಡೆದು ಅಗತ್ಯವಿದ್ದವರಲ್ಲಿ ಕಸಿ ಮಾಡಲಾಗುತ್ತದೆ. ಇದಕ್ಕೆ ಬಹುಹಂತದ ಕಾನೂನು ಪ್ರಕ್ರಿಯೆಗಳಿವೆ. ಕ್ಯಾನ್ಸರ್, ಏಡ್ಸ್ ನಿಂದ ಬಳಲುತ್ತಿರುವವರ ಅಂಗಾಂಗವನ್ನು ಪಡೆಯುವುದಿಲ್ಲ. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಲ್ಲಿ ಸುಸ್ಥಿತಿಯಲ್ಲಿರುವ ಮೂತ್ರಕೋಶ, ಯಕೃತ್, ಹೃದಯದ ಕವಾಟ ಇತ್ಯಾದಿ ಅಂಗಗಳ ದಾನಕ್ಕೆ ಕುಟುಂಬದವರು ನಿರ್ಧರಿಸಬಹುದಾಗಿದೆ.

ಯಕೃತ್, ಮೂತ್ರಪಿಂಡ, ಹೃದಯ, ಕರುಳು, ಕಣ್ಣು, ಶ್ವಾಸಕೋಶ, ಮೇದೋಜೀರಕ ಗ್ರಂಥಿಗಳನ್ನು ದಾನ ಮಾಡಬಹುದು. ಇದು ಅಂಗದಾನ. ರಕ್ತ, ಚರ್ಮ, ಹೃದಯ ಕವಾಟ, ಮೂಳೆ, ನರಗಳನ್ನೂ ದಾನ ಮಾಡಬಹುದಾಗಿದೆ. ಇದು ಅಂಗಾಂಶ ದಾನ. ಜೀವಂತ ದಾನಿಗಳು ಮೂತ್ರಪಿಂಡ, ಕರುಳಿನ ಭಾಗ, ಯಕೃತ್ತಿನ ಭಾಗ, ಶ್ವಾಸಕೋಶದ ಭಾಗ ಅಥವಾ ಮೇದೋಜ್ಜೀರಕ ಗ್ರಂಥಿಯ ಭಾಗವನ್ನು ದಾನ ಮಾಡಬಹುದು. ಹೃದಯ ಮತ್ತು ಶ್ವಾಸಕೋಶವನ್ನು 6 ಗಂಟೆಯೊಳಗೆ, ಕರುಳನ್ನು 10 ,ಯಕೃತ್ 15 ಗಂಟೆಯೊಳಗೆ ಕಸಿ ಮಾಡಬೇಕಾಗುತ್ತದೆ ಎಂದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";