ಆಯವ್ಯಯದಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿರುವ ಗ್ಯಾರಂಟಿ ಯೋಜನೆಗಳ ಕುರಿತು ಜನರು ಸಂತುಷ್ಟರಾಗಿದ್ದಾರೆ. ಇದಕ್ಕಾಗಿ 35410 ಕೋಟಿ ರೂ. ಅಗತ್ಯವಿದ್ದು, ಆಯವ್ಯಯದಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ತಿನಲ್ಲಿ ತಿಳಿಸಿದರು. ಅವರು ಇಂದು ವಿಧಾನಪರಿಷತ್ತಿನಲ್ಲಿ ಆಯವ್ಯಯ ಕುರಿತ ಚರ್ಚೆಗೆ ಉತ್ತರಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಗೆ 13500 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ, 8068 ಕೋಟಿ ರೂ. ಹೆಚ್ಚುವರಿ ಸಾಲ, ಬಂಡವಾಳ ಯೋಜನೆಗಳ ಮರು ಆದ್ಯತೆ ನಿಗದಿ ಮೂಲಕ 6086 ಕೋಟಿ ರೂ. ಹಾಗೂ ರಾಜಸ್ವ ಯೋಜನೆಗಳ ಮರು ಆದ್ಯತೆ ನಿಗದಿ ಪಡಿಸುವ ಮೂಲಕ 7೦೦೦ ಕೋಟಿ ರೂ. ಸೇರಿದಂತೆ ಒಟ್ಟು 34,654 ಕೋಟಿ ರೂ. ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು ಎಂದು ತಿಳಿಸಿದರು.
ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಜೇಬಿಗೆ ಹಣ ಹಾಕುವ ಈ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಮೂಲ ಆದಾಯ (Universal Basic Income) ಕಾರ್ಯಕ್ರಮಗಳಿಂದ ಪ್ರೇರಿತವಾಗಿವೆ. ಶೇ. 9೦ ರಷ್ಟು ಜನರು ತೆರಿಗೆ ಪಾವತಿ ಮಾಡಿದರೆ, ಶೇ. 1೦ ರಷ್ಟು ಜನರು ತೆರಿಗೆಯ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಆದರೆ ಸಂಪನ್ಮೂಲಗಳ ಮರುಹಂಚಿಕೆ ನ್ಯಾಯಯುತವಾಗಿ ಆಗಬೇಕೆಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದ ಆಯವ್ಯಯದ ಗಾತ್ರ 326747 ಕೋಟಿ ರೂ.ಗಳಷ್ಟಿದ್ದು, 2022-23 ರ ಆಯವ್ಯಯ ಗಾತ್ರಕ್ಕಿಂತ ಶೇ. 22 ರಷ್ಟು ಹೆಚ್ಚಳವಾಗಿದೆ. ವಿತ್ತೀಯ ಕೊರತೆ ಶೇ. 2.6 ರಷ್ಟಿದ್ದು, ಸಾಲದ ಪ್ರಮಾಣ ಜಿ.ಎಸ್.ಡಿ.ಪಿ. ಯ ಶೇ. 22 ರಷ್ಟಿದೆ. ಆದ್ದರಿಂದ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ವಿತ್ತೀಯ ಶಿಸ್ತನ್ನು ನಿರ್ಧರಿಸುವ ಎರಡು ಮಾನದಂಡಗಳನ್ನು ನಮ್ಮ ಸರ್ಕಾರ ಪಾಲನೆ ಮಾಡಿದೆ. ಈ ಬಾರಿ 15,523 ಕೋಟಿ ರೂ. ಕೊರತೆ ಬಜೆಟ್ ಮಂಡಿಸಲಾಗಿದ್ದು, ಗ್ಯಾರಂಟಿ ಯೋಜನೆಗಳ ಕಾರಣದಿಂದ ಕೊರತೆ ಬಜೆಟ್ ಮಂಡಿಸಲಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ, ಕೊರತೆ ಪ್ರಮಾಣ ಕಡಿಮೆಯಾಗಿದೆ. ಮುಂದಿನ ಬಾರಿ ಉಳಿತಾಯ ಬಜೆಟ್ ಮಂಡಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಆದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದರು.
ಬಸವಾದಿ ಶರಣರಂತೆ ನುಡಿದಂತೆ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಜಾರಿಯೊಂದಿಗೆ ಪ್ರಣಾಳಿಕೆಯಲ್ಲಿ ತಿಳಿಸಿದ 76 ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಪ್ರತಿದಿನ ಸರಾಸರಿ 50 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಒಟ್ಟಾರೆ 23 ಕೋಟಿ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆತಿದೆ. ಈ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಗೃಹ ಜ್ಯೋತಿ ಯೋಜನೆಯಡಿ 1.16 ಕೋಟಿ ಕುಟುಂಬಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಜುಲೈ 1 ರಿಂದಲೇ ಗೃಹ ಬಳಕೆಗೆ 2೦೦ ಯುನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.
ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರದ ಅಕ್ಕಿ ರಾಜಕೀಯದಿಂದಾಗಿ ಹೆಚ್ಚುವರಿ ಆಹಾರಧಾನ್ಯ ನೀಡಲು ಸಾಧ್ಯವಾಗಿಲ್ಲ. ಬದಲಿಗೆ ಪ್ರತಿ ಫಲಾನುಭವಿಗೆ ತಲಾ 170 ರೂ. ನಂತೆ 4.42 ಕೋಟಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಲು ಚಾಲನೆ ನೀಡಲಾಗಿದೆ. ಈ ವರೆಗೆ 57.51 ಕುಟುಂಬಗಳಿಗೆ 337,೦8 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಗೃಹ ಲಕ್ಷ್ಮಿ ಯೋಜನೆಗೆ ವಾರ್ಷಿಕ 32೦೦೦ ಕೋಟಿ ರೂ. ಅಗತ್ಯವಿದ್ದು, ಪ್ರಸಕ್ತ ಸಾಲಿನಲ್ಲಿ 18೦೦೦ ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು. ಯುವ ನಿಧಿ ಯೋಜನೆಯು ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ನಿರುದ್ಯೋಗಿ ಯುವಕರ ಕೌಶಲ್ಯಾಭಿವೃದ್ಧಿಗೆ ಕೂಡ ಒತ್ತು ನೀಡಲಾಗುವುದು. ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ಪ್ರತ್ಯೇಕ ಇಲಾಖೆಯನ್ನು ತಮ್ಮ ಸರ್ಕಾರದ ಹಿಂದಿನ ಅವಧಿಯಲ್ಲೇ ಪ್ರಾರಂಭಿಸಲಾಯಿತು ಎಂಬುದನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು.
2013-18 ರ ಅವಧಿಯಲ್ಲಿ ನಮ್ಮ ಸರ್ಕಾರ 7.27 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೆವು. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ 12,26,೦೦೦ ಕೋಟಿ ರೂ. ವೆಚ್ಚ ಮಾಡಿದರೂ ಏನೂ ಅಭಿವೃದ್ಧಿ ಮಾಡಿಲ್ಲ ಎಂದ ಮುಖ್ಯಮಂತ್ರಿಗಳು, ತಮ್ಮ ಹಿಂದಿನ ಅವಧಿಯಲ್ಲಿ 14,54,663 ಮನೆಗಳನ್ನು ಕಟ್ಟಿಸಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರವು ಕಟ್ಟಿಸಿದ್ದು 5,19,464 ಮನೆಗಳು. ಅಂತೆಯೇ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ 14,169 ಕಿ.ಮೀ. ಹೆದ್ದಾರಿ ನವೀಕರಣ ಮಾಡಿದ್ದರೆ, ಅವರು ಕೇವಲ 8139 ಕಿ.ಮೀ. ನವೀಕರಣ ಮಾಡಿದ್ದಾರೆ. ತಮ್ಮ ಹಿಂದಿನ ಅವಧಿಯಲ್ಲಿ 696 ಹಾಸ್ಟೆಲ್ ಕಟ್ಟಡ ನಿರ್ಮಿಸಿದ್ದರೆ, ನಿಕಟಪೂರ್ವ ಸರ್ಕಾರವು ಕೇವಲ 47 ಹಾಸ್ಟೆಲ್ ಕಟ್ಟಡ ನಿರ್ಮಿಸಿದೆ ಎಂದು ವಿವರಿಸಿದರು.
ಹಿಂದಿನ ಸರ್ಕಾರದ ಅವಧಿಯ ಬಿಟ್ ಕಾಯಿನ್ ಹಗರಣ, ಪಿಎಸ್‌ಐ ನೇಮಕಾತಿ ಹಗರಣ, ಕೋವಿಡ್ ಉಪಕರಣ/ ಔಷಧ ಖರೀದಿ ಹಗರಣ ಮೊದಲಾದವುಗಳ ತನಿಖೆ ಈಗಾಗಲೇ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು