2 ಪಿಎಚ್.ಸಿ, 24/7 ಕೋವಿಡ್ ಲಸಿಕಾ ಕೇಂದ್ರಕ್ಕೆ ಚಾಲನೆ

ಬೆಂಗಳೂರು,ಜ,1 : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಬ್ರಹ್ಮಣ್ಯನಗರ ಮತ್ತು ವೈಯಾಲಿಕಾವಲ್ ಬಡಾವಣೆಗಳಲ್ಲಿ ಎರಡು ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮತ್ತು ಒಂದು 24/7 ಕೋವಿಡ್ ಲಸಿಕಾ ಕೇಂದ್ರಕ್ಕೆ ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಸುಬ್ರಹ್ಮಣ್ಯ ನಗರದ ಗರಡಿ ಮನೆ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಿಸಿ, ಈ ಕಾಮಗಾರಿಯು ತಕ್ಷಣವೇ ಆರಂಭವಾಗಲಿದೆ ಎಂದರು. ಜೊತೆಗೆ ಕ್ಷೇತ್ರದ ವ್ಯಾಪ್ತಿಯಲ್ಲಿನ ರಾಜಮಹಲ್ ಗುಟ್ಟಹಳ್ಳಿಯಲ್ಲಿ 75 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಯನ್ನು ಸದ್ಯದಲ್ಲೇ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳು, ಡಿಜಿಟಲ್ ಎಕ್ಸ್-ರೇ, ಕಣ್ಣು ಮತ್ತು ದಂತ ಪರೀಕ್ಷೆಯ ಸೇವೆಗಳು ಸುಲಭ ದರದಲ್ಲಿ ಸಾರ್ವಜನಿಕರಿಗೆ ಸಿಗಲಿವೆ. ಕಣ್ಣಿನ ಚಿಕಿತ್ಸೆಗೆ ಸಂಬಂಧಪಟ್ಟಂತೆ ಮಿಂಟೋ ಕಣ್ಣಿನ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ಈ ಆಸ್ಪತ್ರೆಗಳಿಂದ ಹೆಚ್ಚಿನ ಚಿಕಿತ್ಸೆಗೆ ಹೋಗುವವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ರಿಯಾಯಿತಿ ಸಿಗಲಿದೆ. ಇದಲ್ಲದೆ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ಮಕ್ಕಳ ಚಿಕಿತ್ಸೆ ವಿಭಾಗ ಮತ್ತು ಏಪ್ರಿಲ್ ತಿಂಗಳಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ 100 ಹಾಸಿಗೆಗಳ ಚಿಕಿತ್ಸಾ ಘಟಕ ಆರಂಭವಾಗಲಿದೆ. ಮಿಗಿಲಾಗಿ, ಇದೇ ಆಸ್ಪತ್ರೆಯಲ್ಲಿ ಈಗಿರುವ 100 ಹಾಸಿಗೆಗಳ ಹೆರಿಗೆ ವಿಭಾಗಕ್ಕೆ ಇನ್ನೂ 100 ಹಾಸಿಗೆಗಳನ್ನು ಸೇರಿಸಿ, ವಿಸ್ತರಿಸಲಾಗುತ್ತಿದೆ. ಮಣಿಪಾಲ್ ಆಸ್ಪತ್ರೆಯೊಂದಿಗೆ ಜನರಿಗೆ ಡಿಜಿಟಲ್ ಆರೋಗ್ಯ ಸೇವೆಗಳನ್ನು ಪೂರೈಸಲಾಗುವುದು ಎಂದು ಅವರು ವಿವರಿಸಿದರು. ಕೆ.ಸಿ.ಜನರಲ್ ಆಸ್ಪತ್ರೆಯ ಎದುರಿನಲ್ಲಿರುವ ಸರಕಾರಿ ಶಾಲೆಯ ಆವರಣದಲ್ಲಿ 24/7 ಕೋವಿಡ್ ಲಸಿಕಾ ಕೇಂದ್ರಕ್ಕೆ ಹಸಿರು ನಿಶಾನೆ ತೋರಿದ ಅವರು, ವಯೋವೃದ್ಧರು, ಹೆಣ್ಣು ಮಕ್ಕಳು ಮತ್ತು ಯುವಜನರಿಗೆ ಇಲ್ಲಿ ಸುಗಮವಾಗಿ ಲಸಿಕೆ ಕೊಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ದಿನವಿಡೀ ಕಾರ್ಯ ನಿರ್ವಹಿಸಲಿರುವ ಈ ಕೇಂದ್ರದಲ್ಲಿ ವೃದ್ಧರನ್ನು ವಾಹನಗಳಲ್ಲಿ ಕರೆದುಕೊಂಡು ಬಂದರೆ ಅವರು ಇದ್ದಲ್ಲಿಗೇ ಹೋಗಿ ಕೋವಿಡ್ ಲಸಿಕೆ ಕೊಡಲಾಗುವುದು. ಜ.10ರ ನಂತರ 60 ವರ್ಷ ಮೀರಿದವರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುವುದು. ಹಾಗೆಯೇ, 15ರಿಂದ 18 ವರ್ಷದ ನಡುವಿನ ಹೆಣ್ಣು ಮಕ್ಕಳಿಗೆ ಜ.3ರಿಂದ ಲಸಿಕೆ ಕೊಡಲು ಆರಂಭಿಸುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಬೂತ್ ವ್ಯವಸ್ಥೆ ಮಾಡಲಾಗಿದೆ‌ ಎಂದು ಅಶ್ವತ್ಥನಾರಾಯಣ ಹೇಳಿದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕಚಂದ್ರ, ಪಶ್ಚಿಮ ವಲಯದ ಆಯುಕ್ತ ಡಾ.ದೀಪಕ್, ಜಂಟಿ ಆಯುಕ್ತ ಶಿವಸ್ವಾಮಿ, ಪಾಲಿಕೆ ಮಾಜಿ ಸದಸ್ಯರಾದ ಮಂಜುನಾಥ ರಾಜು, ಜಯಪಾಲ್, ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಬೇಳೂರು, ಡಾ.ಬಾಲಸುಬ್ರಹ್ಮಣ್ಯ, ಡಾ.ಮನೋರಂಜನ್ ಹೆಗಡೆ, ಡಾ.ಸುಚೇತ್ ಮುಂತಾದವರಿದ್ದರು.

Leave a Comment

Your email address will not be published. Required fields are marked *

Translate »
Scroll to Top