ಮಾರ್ಚ್ 1-8 ರವರೆಗೆ 16 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಚಿತ್ರೋತ್ಸವದ ಥೀಮ್: ಸರ್ವ ಜನಾಂಗದ ಶಾಂತಿಯ ತೋಟ

Kannada Nadu
ಮಾರ್ಚ್ 1-8 ರವರೆಗೆ 16 ನೇ  ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು: ಈ ಬಾರಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ವಿಷಯವನ್ನು ಆಧರಿಸಿ 16 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವನ್ನು ಮಾರ್ಚ್ 1-8 ರವರೆಗೆ ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯ ನಂತರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಸಾಮಾಜಿಕ ನ್ಯಾಯ ಎಂಬ ಥೀಮ್‌ ಆಧರಿಸಿ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿತ್ತು . ಈ ಬಾರಿಯೂ 60 ಕ್ಕೂ ಹೆಚ್ಚು ದೇಶಗಳ ಚಲನಚಿತ್ರಗಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಪಾಲ್ಗೊಳ್ಳಲಿದ್ದು, 200 ಚಲನಚಿತ್ರಗಳು 13 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿವೆ.

ಒರಾಯ್ ಮಾಲ್ ನಲ್ಲಿ 11 ಪರದೆಗಳು, ಸುಚಿತ್ರಾ ಫಿಲಂ ಸೊಸೈಟಿ ಹಾಗೂ ಡಾ: ಅಂಬರೀಶ್ ಆಡಿಟೋರಿಯಂ, ಚಾಮರಾಜಪೇಟೆ ಇಲ್ಲಿ ತಲಾ ಒಂದು ಪರದೆಯಲ್ಲಿ ಚಿತ್ರ ಪ್ರದರ್ಶನಗೊಳ್ಳಲಿವೆ. ಕನ್ನಡ ಸೇರಿದಂತೆ ಇತರೆ ಭಾಷೆಗಳ 400 ಚಿತ್ರ ಪ್ರದರ್ಶನಗಳು ನಡೆಯಲಿದ್ದು ಬೆಂಗಳೂರು ನಾಗರಿಕರಿಗೆ ಹಾಗೂ ರಾಜ್ಯದ ಎಲ್ಲರಿಗೂ ವಿವಿಧ ದೇಶಗಳ ನಾಗರಿಕತೆಯನ್ನು ಕಾಣಲು ಅವಕಾಶ ಲಭಿಸಲಿದೆ. ಸಿನಿಮಾಸಕ್ತರಿಗೆ ಇದೊಂದು ಸುವರ್ಣಾವಕಾಶ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

9 ಕೋಟಿ ರೂ.ಗಳ ವೆಚ್ಚ

2006 ರಿಂದ ಪ್ರಾರಂಭವಾದ ಚಲನಚಿತ್ರೋತ್ಸವ ಇದೀಗ 16 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ. ಕಳೆದ ವರ್ಷ 7 ಕೋಟಿ ರೂ. ವೆಚ್ಚವಾಗಿತ್ತು. ಈ ವರ್ಷ 9 ಕೋಟಿ ರೂ.ಗಳ ವೆಚ್ಚದಲ್ಲಿ ಚಲನಚಿತ್ರೋಸವ ನಡೆಸಲು ಸಮಿತಿ ತೀರ್ಮಾನಿಸಿದೆ ಎಂದರು.

1 ರಂದು ಉದ್ಘಾಟನೆ, 8 ರಂದು ಸಮಾರೋಪ ಸಮಾರಂಭ ಜರುಗಲಿದೆ. ಸಮಿತಿಯು ಸಿನಿಮೋತ್ಸವದ ರಾಯಭಾರಿಯನ್ನು ತೀರ್ಮಾನಿಸಲಿದೆ. ಸಮಾರಂಭವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲರು ಪಾಲ್ಗೊಳ್ಳವರು.
ಬಜೆಟ್ ಪೂರ್ವಭಾವಿ ಚರ್ಚೆಗಳಿರುವುದರಿಂದ ಮಾರ್ಚ್ 1 ರಿಂದ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಚಲನಚಿತ್ರಮಂದಿಗಳು ಮುಚ್ಚುವ ಪರಿಸ್ಥಿತಿಯಲ್ಲಿರುವಾಗ, ಚಿತ್ರರಂಗಕ್ಕೆ ಸರ್ಕಾರದ ಬೆಂಬಲದ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು 16 ನೇ ಅಂತರರಾಷ್ಟ್ರೀಯ ಸಿನಿಮೋತ್ಸವ. ಈ ಬಾರಿಯ ಸರ್ವ ಜನಾಂಗದ ಶಾಂತಿಯ ತೋಟ ಎಂಬ ವಿಷಯಾಧಾರಿತವಾದ ಚಲನಚಿತ್ರೋತ್ಸವವನ್ನು ಈ ಬಾರಿ ಏರ್ಪಡಿಸಲಾಗುವುದು. ಕನ್ನಡ ಚಲನಚಿತ್ರಗಳ ಉತ್ತೇಜನ ನೀಡುವಂತಹ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುತ್ತಾ ಬಂದಿದೆ. ಕನ್ನಡ ಚಲನಚಿತ್ರಗಳ ಸಹಾಯಧನಕ್ಕಾಗಿ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ಚಿತ್ರಗಳನ್ನು ವೀಕ್ಷಿಸುತ್ತಿದೆ. ಎಂದರು.ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸಲು ಸರ್ಕಾರ ಈಗಾಗಲೇ 110 ಎಕರೆ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಿದ್ದು, ಪಿಪಿಪಿ ಮಾದರಿಯಲ್ಲಿ ಚಿತ್ರನಗರಿಯನ್ನು ನಿರ್ಮಾಣದ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಮುಖ್ಯಮಂತ್ರಿಗಳು ಚಲನಚಿತ್ರಗಳನ್ನು ವೀಕ್ಷಿಸುವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು , ಸಮಯಾವಕಾಶವಾದರೆ, ಸದಭಿರುಚಿಯ ಚಲನಚಿತ್ರಗಳನ್ನು ವೀಕ್ಷಿಸಲು ಪ್ರಯತ್ನಿಸುತ್ತೇನೆ ಎಂದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";