ಬೆಂಗಳೂರು : ಬಿಜೆಪಿ ಸರ್ಕಾರ ಚುನಾವಣೆಯ ಗೆಲುವು ಲೂಟಿಗೆ ಸಿಕ್ಕ ಪರವಾನಿಗೆ ಎಂದು ಭಾವಿಸಿದೆ. ಏಪ್ರಿಲ್ 1ರಿಂದ ಕೇಂದ್ರದ ಮೋದಿ ಸರ್ಕಾರದ ಬೆಲೆ ಏರಿಕೆಯ ನಿರ್ಧಾರದಿಂದ ಎಲ್ಲ ಜನಸಾಮಾನ್ಯರ ನಿತ್ಯ ಬದುಕಿನ ಬಜೆಟ್ ಮೇಲೆ ಗದಾಪ್ರಹಾರ ಮಾಡಿದೆ. ಪ್ರತಿಯೊಬ್ಬರಿಗೂ ‘ದುಬಾರಿ’ಯಲ್ಲಿ ಬದುಕುವುದು ದೊಡ್ಡ ಸವಾಲಾಗಿದೆ. ದುಬಾರಿ’ಯಿಂದ ಪ್ರತಿಯೊಂದು ಮನೆಯಲ್ಲಿ ಬದುಕು ದುಸ್ತರವಾಗಿದೆ ‘ದುಬಾರಿ’ಯು ಪ್ರತಿಯೊಬ್ಬರ ಜೀವನವನ್ನು ಕಮರಿಸುತ್ತಿದೆ. ಆದರೆ ಬಿಜೆಪಿಯು ಹಾಗೂ ಮೋದಿ ಸರ್ಕಾರವು ನಿತ್ಯವೂ ‘ದುಬಾರಿ’ಯನ್ನು ಸಂಭ್ರಮಿಸುವ ಮೂಲಕ ಜನರ ಜೀವನವನ್ನು ಅಣಕ ಮಾಡುತ್ತಿದೆ. ಕಾರಣ, ‘ಮೋದಿ ಸರ್ಕಾರ ಇದ್ದರೆ ಇದೆಲ್ಲವೂ ಸಾಧ್ಯವಿದೆ!’
ಬಿಜೆಪಿ ಹಾಗೂ ಮೋದಿ ಸರ್ಕಾರದ ಲೂಟಿ, ದರೋಡೆ, ಸುಲಿಗೆಯ ರಕ್ತಸಿಕ್ತ ಕಥೆ ಹೀಗಿದೆ:
- 62 ಕೋಟಿ ರೈತರಿಗೆ ತೆರಿಗೆ; ದೇಶದಾದ್ಯಂತ ಪ್ರತಿಭಟನೆ ಮಾಡಿದ ಕಾರಣಕ್ಕೆ ಮೋದಿ ಸರ್ಕಾರ ದೇಶದ ಅನ್ನದಾತನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. 50 ಕೆ.ಜಿಯ DAP ರಸಗೊಬ್ಬರ ಚೀಲದ ಬೆಲೆ 150 ರೂ. ಹೆಚ್ಚಾಗಿದ್ದು, ಅದರ ಬೆಲೆ 1350 ರೂ. ಆಗಿದೆ. ಇನ್ನು ಚೀಲಕ್ಕೆ ಹೆಚ್ಚುವರಿಯಾಗಿ 3 ರೂ. ದರ ಏರಿಸಲಾಗಿದೆ. ದೇಶದ ರೈತರು 1.20 ಕೋಟಿ ಟನ್ ಗಳಷ್ಟು DAP ರಸಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ರೈತರ ಮೇಲೆ ಹೆಚ್ಚುವರಿಯಾಗಿ 3600 ಕೋಟಿ ರೂ. ಹೊರೆ ಬೀಳಲಿದೆ. 50 ಕೆ.ಜಿಯ NKPS ಚೀಲದ ದರ 110 ರೂ ಹೆಚ್ಚಳ ಮಾಡಲಾಗಿದ್ದು, 1290ರಿಂದ 1400 ರೂ. ಆಗಿದೆ. ಇದರಿಂದ ರೈತರಿಗೆ ಹೆಚ್ಚುವರಿಯಾಗಿ 3,740 ಕೋಟಿ ರೂ. ಹೊರೆಯಾಗಲಿದೆ.
- ದಿನಬೆಳಗಾದರೆ ಪೆಟ್ರೋಲ್- ಡೀಸೆಲ್ ದರ ಏರಿಕೆಯ ಉಡುಗೊರೆ: ಕಳೆದ 12 ದಿನಗಳಲ್ಲಿ 10ನೇ ಬಾರಿಗೆ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 7.20 ರೂ ಹೆಚ್ಚಾಗಿದೆ. ಭಾರತ ಸರ್ಕಾರದ ಪೆಟ್ರೋಲಿಯಂ ಯೋಜನಾ ಹಾಗೂ ವಿಶ್ಲೇಷಣಾ ಘಟಕದ ಪ್ರಕಾರ ದೇಶದಲ್ಲಿ 2020-21ರಲ್ಲಿ ಸುಮಾರು 27,969 ಸಾವಿರ ಮೆಟ್ರಿಕ್ ಟನ್ ಗಳಷ್ಟು ಪೆಟ್ರೋಲ್ ಬಳಕೆಯಾಗಿದೆ. ಈಗ 7.20 ರೂ. ಬೆಲೆ ಏರಿಕೆಯಿಂದ ದೇಶದ ಜನರ ಮೇಲೆ ಸುಮಾರು 20,138 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಭಾರತ ಸರ್ಕಾರದ ಪೆಟ್ರೋಲಿಯಂ ಯೋಜನಾ ಹಾಗೂ ವಿಶ್ಲೇಷಣಾ ಘಟಕದ ಪ್ರಕಾರ ದೇಶದಲ್ಲಿ 2020-21ರಲ್ಲಿ ಸುಮಾರು 72,713 ಸಾವಿರ ಮೆಟ್ರಿಕ್ ಟನ್ ಗಳಷ್ಟು ಡೀಸೆಲ್ ಬಳಕೆಯಾಗಿದೆ. ಈಗ 7.20 ರೂ. ಬೆಲೆ ಏರಿಕೆಯಿಂದ ದೇಶದ ಜನರ ಮೇಲೆ ಸುಮಾರು 52,353 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಇಕಾರದಲ್ಲಿದ್ದಾಗ, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 71.41 ರೂ. ಹಾಗೂ ಡೀಸೆಲ್ 55.49 ರೂ.ನಷ್ಟಿತ್ತು. ಆದರೆ ಈಗ ಬೆಂಗಳೂರಿನಲ್ಲಿ ಅದು ಕ್ರಮವಾಗಿ 108 ಹಾಗೂ 92 ರೂ. ಆಗಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮೇಲೆ 9.20 ರೂ ಹಾಗೂ ಡೀಸೆಲ್ ಮೇಲೆ 3.46 ರೂ.ನಷ್ಟು ಅಬಕಾರಿ ಸುಂಕ ಇತ್ತು. ಕಳೆದ ಎಂಟು ವರ್ಷದಲ್ಲಿ ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ ಪೆಟ್ರೋಲ್ ಮೇಲೆ 18.70 ರೂ. ಹಾಗೂ ಡೀಸೆಲ್ ಮೇಲೆ 18.34 ರೂ. ಅಬಕಾರಿ ಸುಂಕ ವಿಧಿಸಿದೆ. ಪೆಟ್ರೋಲ್ ಮೇಲೆ ಶೇ.203ರಷ್ಟು ಹಾಗೂ ಡೀಸೆಲ್ ಮೇಲೆ ಬರೋಬ್ಬರಿ ಶೇ.531ರಷ್ಟು ಸುಂಕ ಹೆಚ್ಚಳ. ಮೋದಿ ಸರ್ಕಾರ ಕಳೆದ 8 ವರ್ಷಗಳಲ್ಲಿ ಪೆಟ್ರೆಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ 26 ಲಕ್ಷ ಕೋಟಿ ಸಂಗ್ರಹಿಸಿದೆ.
- ಅಡುಗೆ ಅನಿಲ ಬೆಲೆ ಏರಿಕೆಯ ಹೊಡೆತ: ಏಪ್ರಿಲ್ 1ರಂದು ವಾಣಿಜ್ಯ ಹಾಗೂ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ ಏಱಿಕೆಯಾಗಿದೆ. ಆ ಮೂಲಕ ಕಳೆದ 2 ತಿಂಗಳಲ್ಲಿ 346 ರೂ. ನಷ್ಟು ಏರಿಕೆಯಾಗಿದ್ದು, ಕಳೆದ 8 ವರ್ಷಗಳ ಬಿಜೆಪಿ ಆಡಳಿತ ಅವಧಿಯಲ್ಲಿ ವಾಣಿಜ್ಯ ಅಡುಗೆ ಅನಿಲ ದರದಲ್ಲಿ ಒಟ್ಟು 845 ರೂ. ಹೆಚ್ಚಳವಾಗಿದೆ. ಇನ್ನು ಗೃಹಬಳಕೆ ಅಡುಗೆ ಅನಿಲದ ಬೆಲೆಯನ್ನು ಮಾರ್ಚ್ 22, 2022ರಂದು 50 ರೂ. ಏಱಿಕೆ ಮಾಡಲಾಗಿತ್ತು. ಕಳೆದ ವರ್ಷ (2021)ದಿಂದ ಈ ಅಡುಗೆ ಅನಿಲ ದರ ಸುಮಾರು 140.50 ರೂ. ನಷ್ಟು ಏರಿಕೆಯಾಗಿದ್ದು, ಭಾರತ ಸರ್ಕಾರದ ಪೆಟ್ರೋಲಿಯಂ ಯೋಜನಾ ಹಾಗೂ ವಿಶ್ಲೇಷಣಾ ಘಟಕದ ಪ್ರಕಾರ ದೇಶದಲ್ಲಿ 2020-21ರಲ್ಲಿ ಸುಮಾರು 27,384 ಸಾವಿರ ಮೆಟ್ರಿಕ್ ಟನ್ ಗಳಷ್ಟು ಪೆಟ್ರೋಲ್ ಬಳಕೆಯಾಗಿದೆ. ಈಗ 140.50 ರೂ. ಬೆಲೆ ಏರಿಕೆಯಿಂದ ದೇಶದ ಜನರ ಮೇಲೆ ಸುಮಾರು 27,095 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.
- CNG ಮೇಲಿನ ದಾಳಿ: ಈ ಅನಿಲವು ಜನಸಾಮಾನ್ಯರ ಇಂಧನವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಕೊಳ್ಳಲು ಅಶಕ್ತವಾಗಿರುವ ಜನರು ಆಟೋ, ಟ್ಯಾಕ್ಸಿ, ಬಸ್, ಟ್ರಕ್ ಮತ್ತು ಕಾರುಗಳಿಗೆ ಈ ಇಂಧನ ಬಳಸುತ್ತಾರೆ. ಏಪ್ರಿಲ್ 1 ರಂದು ಇದರ ದರ 80 ಪೈಸೆಯಷ್ಟು ಏರಿಕೆ ಮಾಡಲಾಗಿದ್ದು, ಆ ಮೂಲಕ ಒಂದು ತಿಂಗಳ ಅವಧಿಯಲ್ಲಿ ಆರು ಬಾರಿ ದರ ಹೆಚ್ಚಿಸಿದ್ದು, ಒಟ್ಟು 4 ರೂ.ನಷ್ಟು ಹೆಚ್ಚಳವಾಗಿದೆ. ಭಾರತ ಸರ್ಕಾರದ ಸಿಎನ್ ಜಿ ಇಂಧನ ಬಳಕೆ 2019-20ರ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 3,247 ಸಾವಿರ ಮೆಟ್ರಿಕ್ ಟನ್ ಗಳಷ್ಟು ಈ ಇಂಧನ ಬಳಸಲಾಗಿದೆ. 2020-2021ರಲ್ಲಿ ಇದರ ಪ್ರಮಾಣ 3,500 ಸಾವಿರ ಮೆಟ್ರಿಕ್ ಟನ್ ಗಳಷ್ಟು ಬಳಸಲಾಗಿದೆ. ಈಗ 4 ರೂ. ದರ ಹೆಚ್ಚಳದಿಂದ ಜನರ ಮೇಲೆ ಸುಮಾಕು 1400 ಕೋಟಿಯಷ್ಟು ಹೊರೆ ಬೀಳಲಿದೆ.
- ಕೊಳವೆ ನೈಸರ್ಗಿಕ ಅನಿಲ (PNG) ದರ ರಾಕೆಟ್ ಮಾದರಿ ಏರಿಕೆ: ಏಪ್ರಿಲ್ 1ರಂದು ದೆಹಲಿಯಲ್ಲಿ 5 ರೂ. ಹಾಗೂ ನೋಯ್ಡಾದಲ್ಲಿ 5.85 ರೂ. ನಷ್ಟು PNG ಅನಿಲ ದರ ಏರಿಕೆಯಾಗಿದೆ. ಮಾರ್ಚ್ 24ರಂದು ದೆಹಲಿಯಲ್ಲಿ 1 ರೂ.ನಷ್ಟು ಏರಿಕೆಯಾಗಿತ್ತು. ಆಮೂಲಕ ಕಳೆದ ತಿಂಗಳು ಒಟ್ಟು 6 ರೂ ದರ ಏರಿಕೆಯಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಜನರ ಮೇಲೆ 961.20 ಕೋಟಿ ಹೊರೆ ಬೀಳಲಿದೆ.
- ಜನರ ಜೇಬು ಸುಡುತ್ತಿದೆ ಟೋಲ್ ತೆರಿಗೆ: ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ತೆರಿಗೆ ಪ್ರಮಾಣ ಶೇ.10- 18ರಷ್ಟು ಹೆಚ್ಚಳ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಈ ತೆರಿಗೆ ಮೂಲಕ ಭಾರತ ಸರ್ಕಾರಕ್ಕೆ 28,458 ಕೋಟಿ ಸಂಗ್ರಹವಾಗಿತ್ತು. 2021-22ರಲ್ಲಿ ಇದು 34,000 ಕೋಟಿ ಆಗುವ ನಿರೀಕ್ಷೆ ಇದೆ. ಇನ್ನು ಶೇ.18ರಷ್ಟು ತೆರಿಗೆ ಏರಿಕೆಯಿಂದ ಪ್ರಯಾಣ ಮಾಡವ ಸಾರ್ವಜನಿಕರ ಮೇಲೆ 6,120 ಕೋಟಿ ರೂ. ಹೊರೆ ಬೀಳಲಿದೆ.
- ಔಷಧಿಯ ತೆರಿಗೆ, ರೋಗಿಗಳಿಗೆ ಬರೆ ಹಾಕಿದಂತೆ: ಮೋದಿ ಸರ್ಕಾರ ರೋಗಿಗಳನ್ನು ಬಿಡದೆ ಸುಲಿಗೆ ಮಾಡಲು ಮುಂದಾಗಿದ್ದಾರೆ. ರಾಷ್ಟ್ರೀಯ ಔಷಧೀಯ ದರ ಪ್ರಾಧಿಕಾರವು ಏಪ್ರಿಲ್ 1ರಿಂದ 800 ಅಗತ್ಯ ಮದ್ದುಗಳ ಮೇಲೆ ಶೇ.10.76ರಷ್ಟು ದರ ಏರಿಕೆ ಮಾಡಿದೆ. ಜನಸಾಮಾನ್ಯರು ಸಹಜವಾಗಿ ಬಳಸುವ ಪ್ಯಾರಾಸಿಟಮಲ್, ಜ್ವರ ಪೀಡಿತರು ಬಳಸುವ ಅಜಿಂತ್ರೋಮೈಸಿನ್, ಸಿಪ್ರೊಫ್ಲೋಕ್ಸಾಸಿನ್ ಹಾಗೂ ಇತರೆ ಕೋವಿಡ್ ಸಮಯದಲ್ಲಿ ಬಳಸುವ ಮದ್ದುಗಳ ಮೇಲೆ ದರ ಏರಿಸಿದೆ. ಜತೆಗೆ ಹೃದಯ ಸಂಬಂಧಿ, ಹೆಚ್ಚು ರಕ್ತದೊತ್ತಡ, ಅನೆಮಿಯಾ, ಚರ್ಮ ರೋಗ, ವಿಟಮಿನ್ ಹಾಗೂ ಮಿನರಲ್ ಮದ್ದುಗಳು ಬೆಲೆ ಏರಿಕೆಯಾಗಿವೆ. ಇದರಿಂದಾಗಿ ಜನಸಾಮಾನ್ಯರ ಮೇಲೆ ಸುಮಾರು 10 ಸಾವಿರ ಕೋಟಿ ಹೊರೆ ಬೀಳಲಿದೆ.
- ಭಾರತೀಯರಿಗೆ ಸ್ವಂತ ಮನೆ ಎಂಬುದು ಮರೀಚಿಕೆಯೇ?: ಮನೆ ಅಥವಾ ಕಟ್ಟಡ ನಿರ್ಮಾಣ ವೆಚ್ಚ ಏಪ್ರಿಲ್ ತಿಂಗಳಲ್ಲಿ ಸುಮಾರು ಶೇ.15ರಷ್ಟು ಏರಿಕೆಯಾಗಿದ್ದು, ಕಬ್ಬಿಣ, ಸೀಮೆಂಟ್, ಇಟ್ಟಿಗೆ, ನೈರ್ಮಲ್ಯ ವ್ಯವಸ್ಥೆ, ಮರಗೆಲಸಗಳ ಬೆಲೆ ಗಣನೀಯವಾಗಿ ಏರಿಕೆಯಾಗಿವೆ. 2021ರ ಮಾರ್ಚ್ ತಿಂಗಳಿಗಿಂತ, 2022ರ ಮಾರ್ಚ್ ತಿಂಗಳವರೆಗೆ ಕಬ್ಬಿಣದ ಬೆಲೆ ಶೇ.30ರಷ್ಟು ಏರಿಕೆ ಕಂಡಿದೆ. ಸೀಮೆಂಟ್ ಶೇ.2ರಷ್ಟು, ಕಾಪರ್ ಮತ್ತು ಅಲ್ಯೂಮಿನಿಯಂ ಶೇ.40ರಿಂದ ಶೇ.44ರಷ್ಟು ಏರಿಕೆಯಾಗಿವೆ. ಪ್ರತಿ ಕೆ.ಜಿ ಕಬ್ಬಿಣ 35 ರೂ.ನಿಂದ 90 ರೂ,ಗೆ ಏರಿಕೆಯಾಗಿದೆ. ಸೀಮೆಂಟ್ ಚೀಲ ಸ,ಮಾರು 100 ರೂ.ನಷ್ಟು ಏರಿಕೆಯಾಗಿದೆ.
- ಗೃಹ ನಿರ್ಮಾಣ ಸಾಲದೆ ಮೇಲಿನ ತೆರಿಗೆ ರದ್ದು: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಇಇಎ ಅಡಿಯಲ್ಲಿ ಮೊದಲ ಬಾರಿ ಮನೆ ಖರೀದಿ ಮಾಡುವವರಿಗೆ ನೀಡಲಾಗುತ್ತಿದ್ದ 1.5 ಲಕ್ಷದಷ್ಟು ಹೆಚ್ಚುವರಿ ತೆರಿಗೆ ವಿನಾಯಿತಿಯನ್ನು ಮೋದಿ ಸರ್ಕಾರವು ರದ್ದುಗೊಳಿಸಿದೆ.
- ಭವಿಷ್ಯ ನಿಧಿ ಖಾತೆ ಮೇಲೂ ತೆರಿಗೆ: ನಿಮ್ಮ ನಿವೃತ್ತಿ ಹಣ ಇನ್ನುಮುಂದೆ ಸರ್ಕಾರದ ಜೇಬಿನಲ್ಲಿರುತ್ತದೆ. ಏ.1 2022ರಿಂದ ಇಪಿಎಫ್ ಖಾತೆಯಲ್ಲಿ 2.5 ಲಕ್ಷಕ್ಕೂ ಹೆಚ್ಚಿರುವವರಿಗೆ ತೆರಿಗೆ ಹಾಕಲಾಗುತ್ತಿದೆ. ಇನ್ನು ಈ ಖಾತೆಯಲ್ಲಿ ನೀಡಲಾಗುತ್ತಿದ್ದ ಬಡ್ಡಿ ದರವನ್ನು ಶೇ.8.5ರಿಂದ ಶೇ.8.1ಕ್ಕೆ ಕಡಿತ ಮಾಡಲಾಗಿದೆ. ಇದರಿಂದ ಸುಮಾರು 6.7 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ.
- ಆಧಾರ- ಪಾನ್ ಜೋಡಣೆ: ಆಧಾರ್ ಹಾಗೂ ಪಾನ್ ಜೋಡಣೆಯನ್ನು ಏಪ್ರಿಲ್ ನಿಂದ ಜೂನ್ ಒಳಗಾಗಿ ಮಾಡದಿದ್ದರೆ 500 ರೂ. ಹಾಗೂ 2023ರ ಮಾರ್ಚ್ ವರೆಗೂ ಮಾಡದಿದ್ದರೆ ಸುಮಾರು 1 ಸಾವಿರ ಕೋಟಿ ದಂಡ ಹಾಕಲಾಗುವುದು. ಇನ್ನು ಹೊಸ ಪಾನ್ ಕಾರ್ಡ್ ತೆಗೆದುಕೊಳ್ಳಲು 107 ರೂ. ಹಾಗೂ ಆಧಾರ್ ಕಾರ್ಡ್ ಪಡೆಯಲು 100 ರೂ. ಇದ್ದು, ದಂಡದ ಮೊತ್ತ 500ರಿಂದ 1000ಕ್ಕೆ ಏರಿಕೆ ಮಾಡಿರುವುದು ನ್ಯಾಯವೇ?
- ಟಿವಿ, ಫ್ರಿಡ್ಜ್, ಎಸಿ, ಎಲ್ ಇಡಿ, ಮೊಬೈಲ್ ದುಬಾರಿ: ಏಪ್ರಿಲ್ 1ರಿಂದ ಮೋದಿ ಸರ್ಕಾರ ಅಲ್ಯೂಮಿನಿಯಂ ಅದಿರಿನ ಮೇಲೆ ಶೇ.30ರಷ್ಟು ಸುಂಕ ವಿಧಿಸಿದ್ದು, ಇದರಿಂದ ಟಿವಿ, ಎಸಿ, ಫ್ರಿಡ್ಜ್ ಪಕರಣಗಳನ್ನು ಮಾಡಲಾಗುವುದು. ಇನ್ನು ಕಂಪ್ರೆಸರ್ ಬಿಡಿ ಭಾಗಗಳ ಆಮದು ಸುಂಕ ಕೂಡ ಹೆಚ್ಚಿಸಿದ್ದು, ಇದರಿಂದ ರೆಫ್ರಿಜರೇಟರ್ ಬೆಲೆ ಏರಿಕೆಯಾಗಲಿದೆ. ಈ ಎಲ್ಲದರಿಂದಾಗಿ ಎಸಿ, ಟಿವಿ, ಫ್ರಿಡ್ಜ್ ಹಾಗೂ ಎಲ್ಇಡಿ ಬಲ್ಬ್ಗಳ ಬೆಲೆ ಶೇ.15ರಷ್ಟು ಹಾಗೂ ಮೊಬೈಲ್ ಬೆಲೆ ಶೇ.20-30ರಷ್ಟು ಏರಿಕೆಯಾಗಲಿದೆ. ಮೋದಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ತೊಂದರೆಗೆ ಒಳಗಾಗದ ಒಬ್ಬ ವ್ಯಕ್ತಿ ಇಲ್ಲವಾಗಿದ್ದಾನೆ. ಈ ಹಗಲುದರೋಡೆಗೆ ಮೋದಿ ಸರ್ಕಾರವೇ ಹೊಣೆ.