೬೮ನೇ ಸಂಸ್ಥಾಪನಾ ದಿನಾಚರಣೆ

ಬಳ್ಳಾರಿ,ಡಿ,28 : ಇಂದು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ೬೮ನೇ ಸಂಸ್ಥಾಪನಾ ದಿನಾಚರಣೆಯನ್ನು ರಾಯಲ್ ಸರ್ಕಲ್ ಬಳಿ ಭಗತ್ ಸಿಂಗ್, ನೇತಾಜಿ ಮತ್ತು ಇನ್ನಿತರೆ ಮಹಾನ್ ವ್ಯಕ್ತಿಗಳ, ಕ್ರಾಂತಿಕಾರಿಗಳ ಸೂಕ್ತಿ ಮತ್ತು ಛಾಯಚಿತ್ರಗಳು, ಎಐಡಿಎಸ್‌ಓದಿಂದ ಬಳ್ಳಾರಿಯಲ್ಲಿ ನಡೆದ ಹಲವು ಯಶಸ್ವಿ ಹೋರಾಟಗಳ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಎನ್.ಇ.ಪಿ-೨೦೨೦ರ ಕುರಿತು, ದೆಹಲಿಯ ರೈತರ ಯಶಸ್ವಿ ಹೋರಾಟದ ಬಗ್ಗೆ ಇರುವ ಪುಸ್ತಕಗಳು, ಭಗತ್ ಸಿಂಗ್‌ರ ಲೇಖನಗಳನ್ನು ಹೊಂದಿದ ಪುಸ್ತಕಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿತ್ತು. ಈ ಸಂದರ್ಭದಲ್ಲಿ ಹೋರಾಟದ ಸ್ಪೂರ್ತಿ ಚಿಲುಮೆಯಾದ ಸ್ವಾತಂತ್ರ್ಯ ಸಂಗ್ರಾಮದ ಧಿರ ಹುತಾತ್ಮ ಭಗತ್ ಸಿಂಗ್ ರವರ ಭಾವಚಿತ್ರಕ್ಕೆ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರು ಗುರಳ್ಳಿರಾಜ ಅವರು ಮಾಲರ್ಪಣೆ ಮಾಡಿದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ ಅವರು ಮಾತನಾಡುತ್ತಾ ಡಿಸೆಂಬರ್ ೨೮ ನಮ್ಮೆಲ್ಲರಿಗೂ ಅತ್ಯಂತ ಮಹತ್ವದ ದಿನ. ೨೮ರಂದು ಎಐಡಿಎಸ್‌ಓ ತನ್ನ ರಾಜಿರಹಿತ ಹೋರಾಟದಲ್ಲಿ ೬೭ವರ್ಷ ಗಳನ್ನು ಪೂರೈಸುತ್ತದೆ. ರಾಜ್ಯದಲ್ಲಿ ೪೦ ಕ್ಕು ಹೆಚ್ಚು ವರ್ಷಗಳಿಂದ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸುತ್ತಾ ಹಲವಾರು ಯಶಸ್ವಿ ಹೋರಾಟಗಳನ್ನು ಕಟ್ಟಿದ ಇತಿಹಾಸ ನಮ್ಮ ಸಂಘಟನೆಗೆ ಇದೆ.

ಮಹಾನ್ ವ್ಯಕ್ತಿಗಳ ಹೋರಾಟ, ತ್ಯಾಗ ಬಲಿದಾನದ ಫಲವಾಗಿ ನಮಗೆ ದೊರೆತಿರುವ ಶಿಕ್ಷಣವು ಎಲ್ಲರಿಗೂ ದೊರಕಬೇಕು ಮತ್ತು ಹಾಗೆ ಪಡೆಯುವ ಶಿಕ್ಷಣವು ಧರ್ಮನಿರಪೇಕ್ಷ – ವೈಜ್ಞಾನಿಕ – ಪ್ರಜಾತಾಂತ್ರಿಕ ವಾಗಿ ಇರಬೇಕು ಎಂಬುದು ನಮ್ಮ ಆಶಯ ಮತ್ತು ಗುರಿ. ಪ್ರಜಾತಾಂತ್ರಿ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದ ದೆಹಲಿಯ ನಿವಾಸಿ ವೈದ್ಯರ (Resident doctors) ಮೇಲೆ ಪೊಲೀಸ್ ಕ್ರೂರ ದಾಳಿಯನ್ನು ಎಐಡಿಎಸ್‌ಓ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ. ಒಂದೆಡೆ,NEET-PG ಮತ್ತು NEET-UG ಕೌನ್ಸಿಲಿಂಗ್ ನ ಅನಗತ್ಯ ಮತ್ತು ಅಸಮಂಜಸ ವಿಳಂಬದಿಂದಾಗಿ, ಆಸ್ಪತ್ರೆಗಳಲ್ಲಿ ಹಾಗು ಕಾಲೇಜುಗಳಲ್ಲಿ ನಿವಾಸಿ ವೈದ್ಯರ ಮೇಲೆ ಅತಿಯಾದ ಒತ್ತಡ, ಹೊರೆ ಸೃಷ್ಟಿಯಾಗಿದೆ. ಇನ್ನೊಂದೆಡೆ, ಸಾವಿರಾರು ಅರ್ಹ ಅಭ್ಯರ್ಥಿಗಳು ಕೌನ್ಸಿಲಿಂಗ್ ನ ವೇಳಾಪಟ್ಟಿಯ ಬಿಡುಗಡೆಗಾಗಿ ತವಕದಿಂದ ಕಾಯುತ್ತಿದ್ದಾರೆ. ವಾಸ್ತವದಲ್ಲಿ, ಒಂದು ಶೈಕ್ಷಣಿಕ ವರ್ಷ ಬಹುತೇಕ ಮುಗಿದೇ ಹೋಗುತ್ತಿದೆ. ಇಂತಹ ಬಿಕ್ಕಟ್ಟಿನ ಶೈಕ್ಷಣಿಕ ಸಂದರ್ಭದ ಸಂಪೂರ್ಣ ಹೊಣೆ ಮತ್ತು ಜವಾಬ್ದಾರಿ ಕೇಂದ್ರ ಸರ್ಕಾರದ್ದೆ ಆಗಿದೆ. ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು ಎಂದು ದೆಹಲಿಯ ನಿವಾಸಿ ವೈದ್ಯರು ಹೋರಾಟಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಮೊದಲಿನಿಂದಲೂ ಈ ಚಳುವಳಿಗೆ ನಮ್ಮ ಬೆಂಬಲವನ್ನು ಸೂಚಿಸುತ್ತಾ ಅವರ ಹೋರಾಟಗಳ ಜೊತೆಗೆ ನಾವು ನಿಂತಿದ್ದೇವೆ.

ಆದರೆ ನೆನ್ನೆ, ದೆಹಲಿ ಪೊಲೀಸರು ನಿವಾಸಿ ವೈದ್ಯರ ಮೇಲೆ ಕ್ರೂರವಾಗಿ ದಾಳಿ ನಡೆಸಿ, ಹಲವರನ್ನು ಥಳಿಸಿ, ಬಂಧಿಸಿ, ಎಳೆದಾಡಿ, ಮಹಿಳಾ ವೈದ್ಯರನ್ನು ನಿಂದಿಸಿದ್ದಾರೆ. ಇದು ಬಹಳ ನಾಚಿಕೆಗೇಡಿನ ಸಂಗತಿಯಾಗಿದೆ. ಇಡೀ ಮನುಕುಲದ ವೈದ್ಯರನ್ನು ಕೋವಿಡ್ ವಾರಿಯರ್ಸ್ ಎಂದು ಕೊಂಡಾಡುತ್ತಿದೆ. ಆದರೆ, ಇತ್ತ ಸರ್ಕಾರವು ತಾನೇ ಸೃಷ್ಟಿಸಿದ ಸಮಸ್ಯೆಗೆ ಪರಿಹಾರ ನೀಡುವ ಬದಲು, ವೈದ್ಯರ ಮೇಲೆ ದಾಳಿ ನಡೆಸಿ, ಬಂಧಿಸಿ, ತನ್ನ ಅತ್ಯಂತ ಬೇಜವಾಬ್ದಾರಿ ಧೋರಣೆ ಮತ್ತು ವರ್ತನೆಯನ್ನು ಬಿಂಬಿಸಿದೆ. ಮಹಿಳಾ ವೈದ್ಯರನ್ನು ಅಮಾನವೀಯವಾಗಿ ನಿಂದಿಸಿದ ಪೊಲೀಸ್ ಸಿಬ್ಬಂದಿಗಳ ಮೇಲೆ ಈ ಕೂಡಲೇ ಕ್ರಮ ಜರುಗಿಸಬೇಕು, ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಲು ಕೇಂದ್ರ ಸರ್ಕಾರ ವ್ಯವಸ್ಥೆಯನ್ನು ಮಾಡಬೇಕು ಎಂದು ಎಐಡಿಎಸ್‌ಓ ಆಗ್ರಹಿಸುತ್ತದೆ. ನ್ಯಾಯವನ್ನು ಸ್ಥಾಪಿಸಲು ನಿವಾಸಿ ವೈದ್ಯರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಐಕ್ಯತೆ ಮತ್ತು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರಾದ ಗುರಳ್ಳಿರಾಜ ಅವರು ಮಾತನಾಡುತ್ತಾ ರೈತರ ಅಭೂತಪೂರ್ವ, ರಾಜಿರಹಿತ ಸುದೀರ್ಘ ಚಳುವಳಿಯನ್ನು ನಾವು ನೆನೆಯಲೇಬೇಕು. ಒಂದು ವರುಷ ನಡೆಸಿದ ಈ ಧೀರೋದ್ದಾತ ಸಂಗ್ರಾಮ ವಿಜಯವನ್ನು ಸಾಧಿಸಿತು. ಈ ಸಮಯದಲ್ಲಿ ಹುತಾತ್ಮರಾದ ೭೦೦ ಕ್ಕು ಹೆಚ್ಚು ರೈತರ ತ್ಯಾಗ ಮತ್ತು ಬಲಿದಾನವು ನಮ್ಮ ಮನದಲ್ಲಿ ಸದಾ ಉಳಿಯುತ್ತದೆ.

ಈ ಚಳುವಳಿಯು ನಮ್ಮೆಲ್ಲರಿಗೂ ಒಂದು ಪಾಠವನ್ನು ಕಲಿಸಿದೆ. ಸರಿಯಾದ ಮಾರ್ಗದಲ್ಲಿ, ಸರಿಯಾದ ವಿಚಾರದಡಿಯಲ್ಲಿ, ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ನಡೆಯುವ ನಿರಂತರ ಹೋರಾಟವನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ. ಒಂದು ವ್ಯವಸ್ಥೆ ದಮನಕಾರಿ ಆಗಿದ್ದರೂ, ಶೋಷಿತರ ಹೋರಾಟದ ಕಿಚ್ಚನ್ನು ಅದು ನಂದಿಸಲು ಸಾಧ್ಯವಿಲ್ಲ. ಇದರೊಂದಿಗೆ, ಶಿಕ್ಷಣವನ್ನು ಖಾಸಗೀಕರಣಗೊಳಿಸುತ್ತಿರುವ ಹಲವು ನೀತಿಗಳು, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಭವಿಷ್ಯವನ್ನು ಮತ್ತೆ ಬಿಕ್ಕಟ್ಟಿಗೆ ತಳ್ಳುವ, ಸಮಾಜದ ಒಟ್ಟಾರೆ ಪ್ರಗತಿಗೆ ಮಾರಕವಾಗುವ ಎನ್‌ಇಪಿ-೨೦೨೦ ರ ವಿರುಧ್ದ ಚಳುವಳಿಯನ್ನು ಕಟ್ಟಲು ದೇಶದ ವಿದ್ಯಾರ್ಥಿಗಳು ರೈತರ ಅಮೋಘ ಹೋರಾಟದ ಸ್ಫೂರ್ತಿಯಿಂದ ಪಾಠವನ್ನು ಕಲಿತು ಮುನ್ನಡೆಯಬೇಕು ಎಂದು ಎಐಡಿಎಸ್‌ಓ ತನ್ನ ೬೮ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷೆ ಜೆ.ಸೌಮ್ಯ ರವರು ಮಾತನಾಡುತ್ತಾ, ದೇಶದ ಅಸಂಖ್ಯಾತ ರೈತರ, ಕೂಲಿ ಕಾರ್ಮಿಕರ, ಕೆಳ ಮಧ್ಯಮ ವರ್ಗದ ಮಕ್ಕಳು ಬಡತನ, ಆರ್ಥಿಕ ಬಿಕ್ಕಟ್ಟು ಮತ್ತು ಪ್ರಮುಖವಾಗಿ ಅಸಮಾನತೆ, ಶಿಕ್ಷಣದ ಖಾಸಗೀಕರಣದ ಕಾರಣದಿಂದಾಗಿ ಶಿಕ್ಷಣದ ಪರಿಧಿಯಿಂದ ದೂರ ಉಳಿದಿರುವುದು ನಮಗೆ ಗೊತ್ತಿದೆ. ಬಾಲ ಕಾರ್ಮಿಕರಾಗಿ, ಗಾಮೆಂಟ್ ನೌಕರರಾಗಿ, ಗುತ್ತಿಗೆ ಆಧಾರದಲ್ಲಿ, ಕಾರ್ಖಾನೆಗಳಲ್ಲಿ ದುಡಿಯುವ ನಮ್ಮದೇ ವಯಸ್ಸಿನ ಮಕ್ಕಳ ಕಂಗಳಲ್ಲಿ ಶಿಕ್ಷಣ ಪಡೆಯಬಹುದು ಎಂಬ ಆಸೆಯೇ ಕಮರಿ ಹೋಗಿದೆ. ಮತ್ತೊಮ್ಮೆ ಆ ಎಲ್ಲ ಮಕ್ಕಳ ಜೀವನದಲ್ಲಿ ಶಿಕ್ಷಣದ ಬೆಳಕನ್ನು ತರುವ ಮಹತ್ತರ ಜವಾಬ್ದಾರಿ ಮತ್ತು ಬಾಧ್ಯತೆ ನಮ್ಮ ಮೇಲಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರಾದ ಕೆ.ಈರಣ್ಣ, ಕಂಬಳಿ ಮಂಜುನಾಥ, ನಿಂಗರಾಜ್, ಅನುಪಮಾ, ಸಿದ್ದು, ನಿಹಾರಿಕ ಮತ್ತು ಸದಸ್ಯರಾದ ಉಮಾದೇವಿ, ಪ್ರಮೋದ್, ನಾಗರತ್ನ, ಮೋಹನ್, ವಿದ್ಯಾರ್ಥಿಗಳಾದ ಶ್ವೇತಾ, ಸೌಮ್ಯ, ಸುನಿಲ್, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top