ಪ್ರಮುಖ ನಾಯಕರಿಗೆ ಸಿಗದ ಮಂತ್ರಿ ಸ್ಥಾನ

ನಂಜುಂಡಪ್ಪ.ವಿ.

ಬೆಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ ಮತ್ತಿತರ ಪ್ರಮುಖ ಹಿರಿಯ ನಾಯಕರಿಗೆ ಈ ಬಾರಿ ಸಚಿವ ಸ್ಥಾನ ದೊರೆತಿಲ್ಲ.

ಕಳೆದ ಮೂರುವರೆ ದಶಕಗಳಿಂದ ಮುಟ್ಟಿದ್ದೆಲ್ಲವೂ ಚಿನ್ನ. ಪ್ರತಿ ಹಂತದಲ್ಲೂ ಗೆಲುವು ಸಾಧಿಸುತ್ತಿದ್ದ, ವರಿಷ್ಠರನ್ನು ಓಲೈಸಿ ಹೇಗಾದರೂ ಮಾಡಿ ಉನ್ನತ ಸ್ಥಾನಮಾನ ಪಡೆಯುತ್ತಿದ್ದ ನಾಯಕರಿಗೆ ಈ ಬಾರಿ ಹೈ ಕಮಾಂಡ್ ಚೆಳ್ಳೆ ಹಣ್ಣು ತಿನ್ನಿಸಿದೆ.

ಬಿ.ಕೆ. ಹರಿಪ್ರಸಾದ್ ಯಾವತ್ತೂ ಸಚಿವರಾಗಲಿಲ್ಲ. ಯಾವುದೇ ಚುನಾವಣೆ ಗೆಲ್ಲಲಿಲ್ಲ.  ಆದರೆ ಕಾಂಗ್ರೆಸ್ ವರಿಷ್ಠರ ಪಡಸಾಲೆಯಲ್ಲಿದ್ದುಕೊಂಡು ಏಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಜೊತೆಗೆ ಗುಜರಾತ್ ಒಳಗೊಂಡಂತೆ ಐದಕ್ಕೂ ಹೆಚ್ಚು ರಾಜ್ಯಗಳ ಉಸ್ತುವಾರಿ ಜವಾಬ್ದಾರಿ ಹೊತ್ತುಕೊಂಡು ಮೆರೆದಿದ್ದರು. ಪ್ರಮುಖವಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬೆಂಬಲ ಹೊಂದಿದ್ದ ಬಿ.ಕೆ. ಹರಿಪ್ರಸಾದ್ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಮನ್ನಣೆ ಪಡೆದಿದ್ದರು.

ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ, ಒಮ್ಮೆ ವಿಧಾನಪರಿಷತ್ತಿನ ಸದಸ್ಯರಾಗಿ, ಪ್ರತಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದ್ದ ಬಿ.ಕೆ.ಹರಿಪ್ರಸಾದ್ ಅವರ ಸಚಿವ ಸ್ಥಾನದ  ರಾಜಕೀಯದ ಕೊನೆಯ ಕನಸಿನ ಓಟಕ್ಕೆ ತೆರೆ ಬಿದ್ದಿದೆ. ಸಚಿವರಾಗಲು ಇದ್ದ ಉಜ್ವಲ ಅವಕಾಶ ಕೈ ತಪ್ಪಿದೆ. ಪಕ್ಷ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವಾಗ ಹೈ ಕಮಾಂಡ್ ವಿಶ್ವಾಸ ಗಳಿಸಲು ಅವರು ವಿಫಲರಾಗಿದ್ದಾರೆ.

ಯುವ ಸಮೂಹದಲ್ಲಿ ಹೊಸ ರಾಜಕೀಯ ತಲೆಮಾರಿನ ನಾಯಕರನ್ನು ಸೃಷ್ಟಿಸಲು ಆಸಕ್ತರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಂದೆ ಬಿ.ಕೆ. ಹರಿಪ್ರಸಾದ್ ಆಟ ಈ ಬಾರಿ ನಡೆಯಲಿಲ್ಲ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎದುರುಹಾಕಿಕೊಂಡು ಡಿ.ಕೆ.ಶಿವಕುಮಾರ್ ಬೆಂಬಲದೊಂದಿಗೆ ಸಂಪುಟಕ್ಕೆ ಸೇರಲು ನಡೆಸಿದ ಪ್ರಯತ್ನ ಸಫಲವಾಗಿಲ್ಲ. ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹಾಕಿದ ಬೆದರಿಕೆಗೆ ಕಾಂಗ್ರೆಸ್ ನಾಯಕರು ಸೊಪ್ಪು ಹಾಕಲಿಲ್ಲ. ಪ್ರತಿಕ್ರಿಯೆ ನೀಡಲೂ ಇಲ್ಲ. ಕಾಂಗ್ರೆಸ್ ಪ್ರಚಂಡ ಬಹುಮತದೊಂದಿಗೆ ಅಧಿಕಾರದಲ್ಲಿರುವಾಗ ಬಿ.ಕೆ. ಹರಿಪ್ರಸಾದ್ ಮುನಿಸಿಕೊಂಡು ರಾಜೀನಾಮೆ ನೀಡಿದರೆ ಪಕ್ಷಕ್ಕಾಗಿ ದುಡಿದ ಮತ್ತೊಬ್ಬರಿಗೆ ಅವಕಾಶ ಕಲ್ಪಿಸಬಹುದು ಎನ್ನುವ ಆಲೋಚನೆಯೂ ಕಾಂಗ್ರೆಸ್ ವಲಯದಲ್ಲಿರಬಹುದು.

ಈ ಬಾರಿಯ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ತಮ್ಮ ಸಹೋದರ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅವರ ಪುತ್ರ ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ದೊರಕಿಸಿಕೊಡುವಲ್ಲಿ ಬಿ.ಕೆ. ಹರಿಪ್ರಸಾದ್ ಸಫಲರಾದರು. ಆದರೆ ಗೆಲ್ಲಿಸಿಕೊಂಡು ಬರಲು ಸಾಧ್ಯವಾಗಲಿಲ್ಲ. ಇದೇ ರೀತಿ ಮಲ್ಲೇಶ್ವಂ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗ ಅನೂಪ್ ಅಯ್ಯಂಗಾರ್ ಅವರಿಗೆ ಟಿಕೆಟ್ ಕೊಡಿಸಿದರು. ಇಲ್ಲಿಯೂ ಗೆಲುವು ಸಾಧ್ಯವಾಗಲಿಲ್ಲ. ಹೀಗಾಗಿ ಬಿ.ಕೆ. ಶಿವರಾಂ ಹಿನ್ನೆಡೆಗೆ ಹತ್ತು ಹಲವು ಕಾರಣಗಳಿವೆ.

ಇನ್ನು ಆರ್.ವಿ.ದೇಶಪಾಂಡೆ ಅವರಿಗೆ ಮತ್ತೆ ಸಚಿವರಾಗಿ ಭಾರೀ ಕೈಗಾರಿಕಾ ಖಾತೆ ನಿಭಾಯಿಸುವ ಮಹತ್ವಾಕಾಂಕ್ಷೆ ಇರಿಸಿಕೊಂಡಿದ್ದರು. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಸಕ್ರಿಯ ರಾಜಕೀಯದಲ್ಲಿರುವ ದೇಶಪಾಂಡೆ ಅತಿ ಹೆಚ್ಚು ಕಾಲ ಕೈಗಾರಿಕಾ ಇಲಾಖೆ ಜವಾಬ್ದಾರಿ ಹೊತ್ತಿದ್ದರು.

ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಸ್ಪರ್ಧಿಸುವ ಸಾಧ್ಯತೆಗಳು ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೊಸ ಮುಖಕ್ಕೆ ಅವಕಾಶ ಮಾಡಿಕೊಡುವ ಹಾಗೂ ಪಕ್ಷ ಸಂಘಟನೆಗೆ ಆದ್ಯತೆ ನೀಡುವ ಉದ್ದೇಶದಿಂದ ಯುವ ನಾಯಕ, ಸಂಭಾವಿತರೆಂದೇ ಗುರುತಿಸಿಕೊಂಡಿರುವ ಮಾಂಕಾಳ ವೈದ್ಯ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ದೇಶಪಾಂಡೆ ಅವರನ್ನು ಹುಡುಕೊಂಡು ಬಂದಿದ್ದ ಸಭಾಧ್ಯಕ್ಷರ ಹುದ್ದೆ ಇದೀಗ ಅವರಿಗೆ ಮಾಯದ ಹಣ್ಣಿನಂತೆ ಮಾಯವಾಗಿದೆ.

ಎಸ್.ಎಂ. ಕೃಷ್ಣ ಅವರ ಅಧಿಕಾರದ ಅವಧಿಯಲ್ಲಿ ಸಚಿವರಾಗಿದ್ದ ರಾಣೀ ಸತೀಶ್ ಅವರಿಗೆ ರಾಜ್ಯಸಭಾ ಸದಸ್ಯತ್ವ ಅರಸಿ ಬಂದಿತ್ತು. ಆದರೆ ಅವರು ಸಚಿವ ಸ್ಥಾನ ತೆರವು ಮಾಡಲು ಬಯಸಲಿಲ್ಲ. ನಂತರ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವರು ಸಚಿವ ಸ್ಥಾನ ಕಳೆದುಕೊಂಡರು, ಮುಂದೆ ಅವರಿಗೆ ಯಾವುದೇ ಅಧಿಕಾರವೂ ದೊರೆಯಲಿಲ್ಲ.

ಸಭಾಧ್ಯಕ್ಷರ ಸ್ಥಾನ ಟಿ.ಬಿ. ಜಯಚಂದ್ರ ಅವರಿಗೂ ಸಹ ಒಲಿದು ಬಂದಿತ್ತು. ಕುಂಚಿಟಿಗ ವಕ್ಕಲಿಗ ಸಮುದಾಯದಿಂದ ಗೆದ್ದ ಶಾಸಕರಾಗಿರುವ ತಮಗೆ ಈ ಬಾರಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದರು. ತುಮಕೂರ ಜಿಲ್ಲೆಯಿಂದ ಡಾ. ಜಿ. ಪರಮೇಶ್ವರ್ ಅವರಿಗೆ ಅವಕಾಶ ಕಲ್ಪಿಸಿರುವ ಹಾಗೂ ಇತರೆ ಹಲವು ಕಾರಣಗಳಿಂದ ಟಿ.ಬಿ. ಜಯಚಂದ್ರ ಅವರಿಗೆ ಅವಕಾಶ ದೊರೆತಿಲ್ಲ. ಹೀಗಾಗಿ ಪ್ರಮುಖ ನಾಯಕರು ಈ ಬಾರಿ ತೆರೆ ಮೆರೆಗೆ ಸರಿಯುವ ಸಾಧ್ಯತೆಗಳು ಕಾಣಿಸಿಕೊಂಡಿವೆ.

Leave a Comment

Your email address will not be published. Required fields are marked *

Translate »
Scroll to Top