ಹಲವರು ಆಸ್ಪತ್ರೆಗೆ ದಾಖಲು: ಪಿಡಿಒ ರೇಣುಕಾರನ್ನು ತರಾಟಗೆ ತೆಗೆದುಕೊಂಡ ಗ್ರಾಮಸ್ಥರು.
ಅರಕೇರಾ : ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರು ಅಸ್ವಸ್ಥರಾದ ಘಟನೆ ಜರುಗಿದ್ದು, ಓರ್ವ ಬಾಲಕ ಶುಕ್ರವಾರ ಸಾವಿಗೀಡಾದ ಪ್ರಕರಣ ದಾಖಲಾಗಿದೆ.
ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಸುಮಾರು 50 ಕ್ಕೂ ಹೆಚ್ಚು ಜನ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದು, ಕೆಲವರು ಗುಣಮುಖರಾಗಿದ್ದಾರೆ. ಇನ್ನುಳಿದವರಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿರುವ ಕುಡಿಯುವ ನೀರಿನ ಪೈಪ್ ಚರಂಡಿಯಲ್ಲಿ ಹಾದು ಹೋಗಿದ್ದು, ಕುಡಿವ ನೀರು ಪೂರೈಕೆಯಾಗುವ ಪೈಪ್‌ನಲ್ಲಿ ಚರಂಡಿ ನೀರು ಬೆರೆತ ಕಾರಣ ಕಲುಷಿತ ನೀರನ್ನು ಸೇವಿಸಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದಾರೆ. ಓರ್ವ ಬಾಲಕ ಹನುಮಂತ ಈರಪ್ಪ (03) ಹೆಚ್ಚಿನ ಚಿಕಿತ್ಸೆಗಾಗಿ ಸಿರವಾರಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.
ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಅನಾರೋಗ್ಯಕ್ಕೆ ತುತ್ತಾದವರಿಗೆ ವಾಂತಿ, ಬೇದಿ, ಜ್ವರ, ತಲೆನೋವು ಕಾಣಿಸಿಕೊಂಡಿದ್ದು, ರೇಕಲಮರಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆ, ಅರಕೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ.
ಪಿಡಿಒರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು :
ರೇಕಲಮರಡಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಗ್ರಾಮಸ್ಥರಿಗೆ ಪೂರೈಕೆಯಾಗುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದೆ ಇರುವುದು ಮುಖ್ಯ ಕಾರಣವಾಗಿದೆ. ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಗೀತಗೊಂಡಿದ್ದು ದುರಸ್ಥಿಗೆ ಮುಂದಾಗುತ್ತಿಲ್ಲ. ಟ್ಯಾಂಕರ್ ಹಾಗೂ ಪೈಪ್ ನಲ್ಲಿ ಹುಳುಗಳು ಕಾಣಿಸಿಕೊಂಡಿದ್ದಲ್ಲದೇ, ಪೈಪ್ ಹೊಡೆದು ಕಲುಷಿತ ನೀರು ಪೂರೈಕೆಯಾಗಿದೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದ್ದು, ಕುಡಿವ ನೀರು ಪೂರೈಕೆಯಲ್ಲಿ ಗ್ರಾ.ಪಂ ಆಡಳಿತ ನಿರ್ಲಕ್ಷದಿಂದ ಗ್ರಾಮದವರೆಲ್ಲ ಅನಾರೋಗ್ಯಕ್ಕೆ ತುತ್ತಾಗುವ ಸಂಭವ ನಿರ್ಮಾಣವಾಗಿದೆ. ಪಿಡಿಒ ಹಾಗೂ ಆಡಳಿತ ಮಂಡಳಿ ಉದಾಸೀನತೆಗೆ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ಬಂದೊದಗಿದೆ ಎಂದು ಜಾಗೀರ ಜಾಡಲದಿನ್ನಿ ಗ್ರಾ.ಪಂ ಪಿಡಿಒ ರೇಣುಕಾರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಈ ವೇಳೆ ಅರಕೇರಾ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ದೇವದುರ್ಗ ತಹಸೀಲ್ದಾರ್ ವೈ.ಕೆ ಬಿದರಿ, ಗ್ರಾ.ಪಂ ಅಧ್ಯಕ್ಷ ನಾಗರಾಜ ಅಬಕಾರಿ, ಡಿಎಚ್‌ಒ ಡಾ.ಸುರೇಂದ್ರ ಬಾಬು, ಟಿಎಚ್‌ಒ ಡಾ.ಬನದೇಶ್ವರ, ಪಿಐ ಹೊಸಕೇರಪ್ಪ ಕೆ, ಪಿಡಿಒ ರೇಣುಕಾ, ಡಾ.ಅಖಿಲೇಶ ಇತರರಿದ್ದರು.
ಗ್ರಾಮದಲ್ಲಿ ಬೀಡು ಬಿಟ್ಟ ಆರೋಗ್ಯ ಸಿಬ್ಬಂದಿ :
ರೇಕಲಮರಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳಕ್ಕೆ ತಹಸೀಲ್ದಾರ್, ಡಿಎಚ್‌ಒ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಸ್ವಸ್ಥಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಹಿನ್ನಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲೆ ಬೀಡು ಬಿಟ್ಟಿದ್ದು, ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಿ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಮಗುವಿನ ಬಲಿಪಡೆದ ಕಲುಷಿತ ನೀರು :
ಕಲುಷಿತ ನೀರು ಸೇವಿಸಿ ಕಳೆದ ಎರಡು ದಿನಗಳಿಂದ ಅಸ್ವಸ್ಥಗೊಂಡಿದ್ದ ಹನುಮಂತ ಈರಪ್ಪ (3) ವಾಂತಿ, ಬೇದಿಯಿಂದ ಬಳಲುತ್ತಿದ್ದ ಮಗುವು ಚಿಕಿತ್ಸೆ ಫಲಕಾರಿಯಾಗದೆ ಬಲಿಯಾಗಿದೆ. ಗಂಡು ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪಿಐ ಹೊಸಕೇರಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.