ಬೆಂಗಳೂರು : ಐದು ಗ್ಯಾರಂಟಿ ಯೋಜನೆಗಳನ್ನು ಗ್ಯಾರಂಟಿಯಾಗಿ ಕೊಟ್ಟೆ ಕೊಡುತ್ತೇವೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ 343 ಮತ್ತು 343 ಎ ಕೊಠಡಿಯಲ್ಲಿ ಇಂದು ಪೂಜೆ ಮಾಡಿಸಿ ಪ್ರವೇಶ ಪಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ನಡೆದ ಸಭೆಯಲ್ಲಿ ಸಿಎಂ ಉತ್ತರ ಕೊಡುತ್ತೇವೆಂದು ಹೇಳಿದ್ದಾರೆ. ಗ್ಯಾರಂಟಿಗಳನ್ನು ಗ್ಯಾರಂಟಿಯಾಗಿ ಕೊಟ್ಟೆ ಕೊಡ್ತಿವಿ. ಹಣವನ್ನು ಯಾವ ರೀತಿ ಒದಗಿಸಬೇಕೆಂದು ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಸಭೆ ಮಾಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನನ್ನ ಜಿಲ್ಲೆಯಲ್ಲಿ ನಾನು ಒಬ್ಬನೇ ಮಂತ್ರಿ ಇದ್ದೇನೆ. ನನಗೆ ಕೊಡ್ತಾರೆ ಎಂಬ ನಂಬಿಕೆ ಇದೆ. ಉಸ್ತುವಾರಿ ಕೊಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಯಾವ ಅಧಿಕಾರ ಕೊಟ್ಟರು ನಿಷ್ಟೆಯಿಂದ ಕೆಲಸ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರು ಸೇರಿ ಜವಾಬ್ದಾರಿ ಕೊಟ್ಟಿದ್ದಾರೆ. ಪರಿಶಿಷ್ಟ ಪಂಗಡ ಕಲ್ಯಾಣ , ಯುವಜನ ಕ್ರೀಡಾ ಸಚಿವನಾಗಿ ರಾಜ್ಯದಲ್ಲಿ ಸೇವೆಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಕ್ರೀಡೆಯಲ್ಲಿ ಅದ್ಬುತ ಅವಕಾಶಗಳಿವೆ. ಈ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಕೆಲಸಗಳನ್ನು ಹಾಗೂ ಯುವ ಜನತೆಗೆ ಅಸಕ್ತಿ ಹೊಂದಿರುವ ಕ್ರೀಡೆಯಲ್ಲಿ ಒಳ್ಳೆಯ ಅವಕಾಶ ರಾಜ್ಯ ಸರ್ಕಾರ ಕಲ್ಪಿಸಿಕೊಡುತ್ತದೆ ಎಂದು ಹೇಳಿದರು.
ಅಧಿಕಾರ ವರ್ಗ ನಾನು ಸೇರಿ ಜೋಡೆತ್ತುಗಳ ರೀತಿಯಲ್ಲಿ ಎರಡು ಇಲಾಖೆಯನ್ನು ನಡೆಸಿಕೊಂಡು ಹೋಗುತ್ತೇವೆ. ಸಿಎಂ ಅವರು ಇಟ್ಟಿರುವ ನಂಬಿಕೆಯನ್ನು ಶಕ್ತಿಮೀರಿ ಉಳಿಸಿಕೊಳ್ಳುತ್ತೇನೆ ಎಂದರು.