ಇಂದು IPL ಫೈನಲ್ || ಮೀಸಲು ದಿನ ಕೂಡ ಮಳೆ ಬಂದರೆ ಯಾರಾಗಲಿದ್ದಾರೆ ಚಾಂಪಿಯನ್..?

ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಫೈನಲ್ ಪಂದ್ಯವನ್ನು ಮಳೆ ಹಿನ್ನೆಲೆ ಮೀಸಲು ದಿನವಾದ ಇಂದು ಸೋಮವಾರಕ್ಕೆ ಮುಂದೂಡಲಾಗಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸುರಿದ ಮಳೆಯಿಂದಾಗಿ ಟಾಸ್ ಪ್ರಕ್ರಿಯೆ ಕೂಡ ನಡೆಸಲಾಗಿಲ್ಲ. ಇದರಿಂದಾಗಿ ರೋಚಕ ಕಾದಾಟ ವೀಕ್ಷಿಸಲು ಭಾನುವಾರ ಬಂದಿದ್ದ 1,32,000 ಪ್ರೇಕ್ಷಕರು ನಿರಾಸೆ ಅನುಭವಿಸಿದರು.

ಭಾನುವಾರ ರಾತ್ರಿ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಸಂಜೆ 6.30ರ ವೇಳೆಗೆ ಮಳೆ ಸುರಿಯಲಾರಂಭಿಸಿತು. ಮೈದಾನ ಸಿಬ್ಬಂದಿಗಳು ಪಿಚ್‌ಗಳಿಗೆ ಹೊದಿಕೆ ಹಾಕಿದರು. 7 ಗಂಟೆ ಹೊತ್ತಿಗೆ ಗುಡುಗು ಮತ್ತು ಮಿಂಚು ಸಹಿತ ಮಳೆ ಹೆಚ್ಚಿದ್ದರಿಂದ ಕ್ರೀಡಾಂಗಣದಲ್ಲಿ ನೀರು ಹರಿಯಿತು. ರಾತ್ರಿ 8.30 ಹೊತ್ತಿಗೆ ಮಳೆ ನಿಂತಿತು. ಅಂಪೈರ್‌ಗಳು ಮೈದಾನ ಪರಿಶೀಲಿಸಿ ಟಾಸ್ ಪ್ರಕ್ರಿಯೆಗೆ ಮುಂದಾದರು. ಇನ್ನೇನು ಟಾಸ್ ನಡೆಯುತ್ತೆ ಎನ್ನುವಷ್ಟರಲ್ಲಿ ಪುನಃ ಮಳೆ ಸುರಿಯಲಾರಂಭಿಸಿತು.

ರಾತ್ರಿ ಸುಮಾರು 10.30ರವರೆಗೂ ಜೋರಾಗಿ ಮಳೆ ಮುಂದುವರಿಯಿತು. ಪಿಚ್‌ಗೆ ಹಾಕಿದ್ದ ಹೊದಿಕೆ ಮತ್ತು ಔಟ್‌ಫೀಲ್ಡ್‌ನಲ್ಲಿ ಸಾಕಷ್ಟು ನೀರು ನಿಂತಿತು. ಅಂತಿಮವಾಗಿ ರಾತ್ರಿ 10.55ರ ವೇಳೆಗೆ ಮ್ಯಾಚ್‌ ರೆಫರಿ ಜಾವಗಲ್‌ ಶ್ರೀನಾಥ್‌ ಮತ್ತು ಅಂಪೈರ್‌ಗಳು ಮಾತುಕತೆ ನಡೆಸಿ ಪಂದ್ಯವನ್ನು ಇಂದು ಸೋಮವಾರಕ್ಕೆ ಮುಂದೂಡಲು ನಿರ್ಧಾರ ಮಾಡಿದರು.

ಮೀಸಲು ದಿನವಾದ ಇಂದುಕೂಡ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಮವಾರ ಸಂಜೆ ವೇಳೆಗೆ ಮಳೆ ಸುರಿಯಲಿದ್ದು, ದಿನಪೂರ್ತಿ ಮೋಡ ಕವಿದ ವಾತಾವರಣ ಇರುತ್ತದೆ ಎಂದು ವರದಿ ಹೇಳಿದೆ. ದೇಶದ ಪ್ರಸ್ತುತ ಹವಾಮಾನ ವರದಿ ಗಮನಿಸಿದರೆ, ಯಾವುದೇ ಸಮಯದಲ್ಲಿ ಮಳೆಯಾಗಬಹುದು. ಜೋರಾಗಿ ಮಳೆ ಸುರಿದು 5 ಓವರ್​ಗಳ ಪಂದ್ಯ ಅಥವಾ ಸೂಪರ್ ಓವರ್​ನ ಪಂದ್ಯ ಕೂಡ ನಡೆಸಲು ಸಾಧ್ಯವಾಗಲಿಲ್ಲ ಎಂದಾದರೆ ಲೀಗ್ ಹಂತದ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ವಿಜಯಶಾಲಿಯಾಗಲಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್​ಗೆ ಲಾಭವಾಗಲಿದ್ದು, ಐಪಿಎಲ್ ​2023 ಚಾಂಪಿಯನ್ ಪಟ್ಟ ಅಲಂಕರಿಸಲಿದೆ.

Leave a Comment

Your email address will not be published. Required fields are marked *

Translate »
Scroll to Top